ರೇವೂರರಿಗೆ ಸಚಿವಸ್ಥಾನ: ಮನವಿಗಾಗಿ ನಿಯೋಗ

ಕಲಬುರಗಿ ಆ 24: ದತ್ತಾತ್ರೇಯ ಪಾಟೀಲ ರೇವೂರರಿಗೆ ಸಚಿವ ಸ್ಥಾನ ನೀಡಿ,ಹೈಕ ಭಾಗದ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರಾಶಸ್ತ್ಯ ನೀಡುವಂತೆ ಮನವಿ ಸಲ್ಲಿಸಲು ಶೀಘ್ರವೇ ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಲಾಗುವದು ಎಂದು ವೀರಶೈವ ಲಿಂಗಾಯತ ಜಂಗಮ ಸಮಿತಿ ಅಧ್ಯಕ್ಷ,ಪಾಲಿಕೆ ಸದಸ್ಯ ಶಿವುಸ್ವಾಮಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೈಕ ಭಾಗದಲ್ಲಿ 17 ಜನ ಬಿಜೆಪಿ ಶಾಸಕರು ಆಯ್ಕೆಯಾಗಿದ್ದು,ಅದರಲ್ಲಿ 7 ಜನ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಈ  ಭಾಗದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಗೊಳುವಲ್ಲಿ ದಿವಂಗತ ಚಂದ್ರಶೇಖರ ಪಾಟೀಲ ರೇವೂರ ಅವರ ಕೊಡುಗೆ ಅಪಾರವಾಗಿದೆ. ಅವರು ಎರಡು ಬಾರಿ ಆಯ್ಕೆಯಾದರೂ ಸಚಿವ ಸ್ಥಾನದಿಂದ ವಂಚಿತರಾದರು. ಕ್ರಿಯಾಶೀಲ ಯುವಕ ದತ್ತಾತ್ರೇಯ ಪಾಟೀಲ ರೇವೂರ ಅವರು ಎರಡು ಸಲ ಶಾಸಕರಾಗಿದ್ದಾರೆ. ಬಿಜೆಪಿ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಅಪಾರ ಜನಪ್ರಿಯತೆ ಹೊಂದಿದ್ದು ,ಯುವ ಜನತೆಯನ್ನು ಸೆಳೆಯುವ ಗುಣಾತ್ಮಕ ಚಿಂತನೆ ಹೊಂದಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ.ಹೊರಗಿನವರು ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗುವದು ಎಷ್ಟು ಸೂಕ್ತ? ಎಂದು ಅವರು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ  ಎನ್ ಎಸ್ ಹಿರೇಮಠ,ಸಿದ್ರಾಮಯ್ಯ ಪುರಾಣಿಕ,ನಾಗಲಿಂಗಯ್ಯ ಮಠಪತಿ ಉಪಸ್ಥಿತರಿದ್ದರು..

Leave a Comment