ರೇವಣ್ಣ ಸಿಎಂ ಆಗಬಹುದು ಹೆಚ್‌ಡಿಕೆಗೆ ಸಿದ್ದು ಗುದ್ದು

ಬೆಂಗಳೂರು, ಮೇ ೧೬- ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬಹುದು ಎಂಬ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಮುಖ್ಯಮಂತ್ರಿ ಆಗಬಹುದೆಂದು ಟ್ವೀಟರ್‌ನಲ್ಲಿ ಕುಟುಕಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಖರ್ಗೆ ಮುಖ್ಯಮಂತ್ರಿ ಆಗಬಹುದು ಎಂದು ಹೇಳಿರುವುದು ಸರಿಯಾಗಿಯೇ ಇದೆ ರೇವಣ್ಣ ಕೂಡ ಮುಖ್ಯಮಂತ್ರಿ ಆಗಲು ಎಲ್ಲಾ ಅರ್ಹತೆ ಪಡೆದಿದ್ದಾರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಅಷ್ಟೇ ಅಲ್ಲ ಅವರಿಗೆ ಅದಕ್ಕಿಂತಲೂ ಉನ್ನತ ಹುದ್ದೆ ಪಡೆಯಲು ಅವರು ಅರ್ಹರಾಗಿದ್ದಾರೆ ಎಂದು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನ ಪಡೆಯಲು ಅರ್ಹತೆ ಇರುವವರು ಬಹಳಷ್ಟು ಮಂದಿ ಇದ್ದಾರೆ. ಅವರಲ್ಲಿ ಸಚಿವ ಹೆಚ್.ಡಿ.ರೇವಣ್ಣ ಕೂಡ ಒಬ್ಬರು ಎಂದು ಹೇಳಿದ್ದಾರೆ.

ಸಿದ್ದು ಸ್ಪಷ್ಟನೆ

ಸಂಸದ ಮಲ್ಲಿಕಾರ್ಜುನ ಖರ್ಗೆ, ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಹಲವರು ಸಿ.ಎಂ.ಪಟ್ಟಕ್ಕೇರಲು ಅರ್ಹರಿದ್ದಾರೆಂದು ಇಂದು ಬೆಳಿಗ್ಗೆ ಟ್ವಿಟರ್ ಮೂಲಕ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ವಿಟರ್ ಮೂಲಕ ನಾನು ಹೇಳಿಕೆ ನೀಡಿರುವುದು ನಿಜ. ಸಿ.ಎಂ.ಆಗೋಕೆ ಹಲವರು ಅರ್ಹರಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನಕ್ಕೀಂತಲೂ ದೊಡ್ಡ ಹುದ್ದೆಯ ಅರ್ಹತೆ ಇದೆ ಎಂದು ಹೇಳಿದ್ದೇನೆ. ಆದರೆ ಅವರು ಇಂದೇ ಮುಖ್ಯಮಂತ್ರಿಯಾಗುತ್ತಾರೆಂದು ನಾನೇನೋ ಹೇಳಿಲ್ಲ ಎಂದರು.

Leave a Comment