ರೇವಣ್ಣ ಸತ್ಯಹರಿಶ್ಚಂದ್ರರೇ? ಶಾಸಕ ಎಂ.ಪಿ.ಆರ್. ಪ್ರಶ್ನೆ

ಬೆಂಗಳೂರು, ಫೆ. ೧೨- ತಮ್ಮ ವಿರುದ್ಧ ಕೀಳುಮಟ್ಟದ ಟೀಕೆ ಮಾಡಿರುವ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಸತ್ಯಹರಿಶ್ಚಂದ್ರರೇ? ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ತಮ್ಮನ್ನು 420 ಎಂದು ಟೀಕಿಸಿದ್ದ ಸಚಿವ ರೇವಣ್ಣ ಅವರ ವಿರುದ್ಧ ಹರಿಹಾಯ್ದಿರುವ ರೇಣುಕಾಚಾರ್ಯ, ರೇವಣ್ಣ ತನಗಿಂತ ವಯಸ್ಸಿನಿಂದ ಹಿರಿಯರಿದ್ದು, ಅವರಿಂದ ಈ ರೀತಿಯ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ರೇವಣ್ಣ ಅವರ ವಿರುದ್ಧ ಟೀಕೆ ಮಾಡಲು ತಮಗೂ ಪದಗಳು ಬರುತ್ತವೆ, ಆದರೆ ಅವರ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ ಎಂದು ಹೇಳಿರುವ ಅವರು, ತಮ್ಮನ್ನು ಕುರಿತು ಆಡಿರುವ ಮಾತುಗಳಿಗೆ ರೇವಣ್ಣ ಕೂಡಲೇ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
ರೇವಣ್ಣ ತಮ್ಮ ಸ್ವಾಭಿಮಾನವನ್ನು ಕೆಣಕಿದ್ದಾರೆ, ಅವರೇನು ಹರಿಶ್ಚಂದ್ರರೇ, ಕ್ಷಮೆ ಕೇಳದಿದ್ದಲ್ಲಿ, ಅವರು ಮಾಡಿರುವ ಎಲ್ಲಾ ಹಗರಣಗಳನ್ನು ಬಯಲಿಗೆಳೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.

Leave a Comment