ರೇವಣ್ಣ ಆಪ್ತನ ಮನೆ ಮೇಲೆ ಐಟಿ ದಾಳಿ

ಹಾಸನ, ಫೆ. ೧೨- ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತನ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಹಾಸನದ ಸಂಗಮೇಶ್ವರ ಬಡಾವಣೆಯಲ್ಲಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತ ಕ್ಲಾಸ್ ಒನ್ ಕಂಟ್ರಾಕ್ಟರ್ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ದಾಖಲೆಪತ್ರಗಳನ್ನು ಪರಿಶೀಲಿಸಿ ಲೆಕ್ಕ ಸಿಗದ ಹಲವು ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಬೆಳಿಗ್ಗೆಯಿಂದಲೇ 8ಕ್ಕೂ ಹೆಚ್ಚು ಅಧಿಕಾರಿಗಳ ತಂಡ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮಧ್ಯರಾತ್ರಿವರೆಗೂ ದಾಳಿ ಮುಂದುವರೆಸಿ ಹಲವು ಮಹತ್ವದ ದಾಖಲೆಪತ್ರಗಳೂ ಸೇರಿದಂತೆ ನಗದು, ಚಿನ್ನಾಭರಣ ಸೇರಿದಂತೆಹಲವು ಮಹತ್ವದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ನೋಟೀಸ್
ಆದಾಯ ತೆರಿಗೆ ದಾಳಿಯ ಹಿನ್ನೆಲೆಯಲ್ಲಿ ಶಿವಕುಮಾರ್ ಅವರಿಗೆ ಇಲಾಖಾಧಿಕಾರಿಗಳು ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಹಿಂದೆಯೂ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆದಿತ್ತು. ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಆಪ್ತರಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

Leave a Comment