ರೇಣುಕಾ ಹತ್ಯೆ ದುಷ್ಕರ್ಮಿಗಳ ಸೆರೆಗೆ ಆಗ್ರಹ

ಹಾವೇರಿ, ಆ. ೧೧- ಕೆಲ ದಿನಗಳ ಹಿಂದೆಷ್ಟೇ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿರುವ ವಿದ್ಯಾರ್ಥಿನಿ ರೇಣುಕಾ ಪಾಟೀಲ್‌ರ ಸಾವಿಗೆ ನ್ಯಾಯ ಸಿಗಬೇಕು, ಆರೋಪಿಗಳನ್ನು ಬಂಧಿಸಬೇಕು. ಇದಕ್ಕಾಗಿ ಎಲ್ಲರೂ ಹೋರಾಟದಲ್ಲಿ ಕೈಜೋಡಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ.

ಕಳೆದ ಸೋಮವಾರ ಕಾಲೇಜಿಗೆಂದು ಹೋಗಿದ್ದ ರೇಣುಕಾಪಾಟೀಲರ ಶವ ಕಾಲೇಜಿನ ಸಮೀಪದ ನಲ್ಲಹಳ್ಳಿಯ ಸೇತುವೆ ಕೆಳಗೆ ಪತ್ತೆಯಾಗಿತ್ತು. ಯಾರೋ ದುರುಳರು ಈಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಇದುವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆರೋಪಿಯನ್ನು ಬಂಧಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಂತೂ ಜೆಸ್ಟಿಸ್ ಫಾರ್ ರೇಣುಕಾ ಎಂಬ ಅಭಿಯಾನವನ್ನು ಆರಂಭಿಸಲಾಗಿದ್ದು, ಮಹಿಳೆಯರನ್ನು ರಕ್ಷಿಸಿ ಪ್ರಜಾ ಪ್ರಭುತ್ವವನ್ನು ಉಳಿಸಿ ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.

ವಿದ್ಯಾರ್ಥಿಗಳ ಪ್ರತಿಭಟನೆ

ರೇಣುಕಾಪಾಟೀಲ್‌ರ ಸಾವು ಸಾಕಷ್ಟು ಸುದ್ದಿ ಮಾಡಿದ್ದು ಹಾವೇರಿಯಲ್ಲಿ ನಿನ್ನೆ ವಿದ್ಯಾರ್ಥಿಗಳು ಶಾಲಾ-ಕಾಲೇಜು ಬಂದ್ ನಡೆಸಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದರು. ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರತಿಭಟನಾ ಹೋರಾಟದಲ್ಲಿ ಪಾಲ್ಗೊಂಡು, ರೇಣುಕಾ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿವೆ.

ಏನಿದು ಪ್ರಕರಣ

ಹಾಲೂರಿನ ಸವಣೂರು ತಾಲ್ಲೂಕಿನ ಮಣ್ಣೂರಿನ ಸುಸಂಸ್ಕೃತ ಮನೆತನಕ್ಕೆ ಸೇರಿದ ರೇಣುಕಾಪಾಟೀಲ್ ಹಾವೇರಿಯ ಜಿಹೆಚ್ ಕಾಲೇಜಿನ ಕಾಮರ್ಸ್ ವಿಭಾಗದಲ್ಲಿ ದ್ವಿತೀಯ ವರ್ಷದ ಪಿಯುಸಿ ಓದುತ್ತಿದ್ದು, ಈಕೆಯನ್ನು ಕಳೆದ ಸೋಮಾವಾರ ಈತನ ಅಣ್ಣ ಕಾರಿನಲ್ಲಿ ಕಾಲೇಜಿಗೆ ಡ್ರಾಪ್ ಮಾಡಿದ್ದರು. ನಂತರ ರೇಣುಕಾ ನಾಪತ್ತೆಯಾಗಿದ್ದರು. ಸೋಮವಾರ ಕಾಲೇಜಿನಿಂದ ಮನೆಗೆ ಬಾರದ ರೇಣುಕಾಪಾಟೀಲ್‌ ಅವರ ಕುಟುಂಬ ಇಡೀ ದಿನ ಹುಡುಕಾಡಿ ನಂತರ ಮಂಗಳವಾರ ಪೊಲೀಸರಿಗೆ ದೂರು ನೀಡಿತ್ತು.

ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ನಂತರ ರೇಣುಕಾಪಾಟೀಲ್‌ರ ಶವ ನಲ್ಲಹಳ್ಳಿಯ ಸೇತುವೆ ಕೆಳಗೆ ಪತ್ತೆಯಾಗಿತ್ತು. ಯಾರೋ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿತ್ತು. ಈ ಪ್ರಕರಣ ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂಬ ಒತ್ತಾಯವು ಎಲ್ಲೆಡೆ ಮೊಳಗಿದೆ.

Leave a Comment