ರೆಡ್ಡಿಗೆ ಮುಂದುವರೆದ ಶೋಧ : ಬಳ್ಳಾರಿಯ ನಿವಾಸದ ಮೇಲೆ ಸಿಸಿಬಿ ದಾಳಿ, ದಾಖಲೆಗಳ ಪರಿಶೀಲನೆ

ಬೆಂಗಳೂರು, ನ. ೮- ಬಹುಕೋಟಿ ಮೊತ್ತದ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಬಂಧನಕ್ಕೆ ಸಿಸಿಬಿಯ ನಾಲ್ಕು ಪೊಲೀಸರ ತಂಡಗಳು ಬಲೆ ಬೀಸಿರುವ ಬೆನ್ನಲ್ಲೆ ಬಳ್ಳಾರಿಯ ಸಿರಗುಪ್ಪ ರಸ್ತೆಯಲ್ಲಿರುವ ನಿವಾಸದಲ್ಲಿ ಮುಂಜಾನೆ ಅಧಿಕಾರಿಗಳ ತಂಡ ಮನೆಯ ಮೇಲೆ ದಾಳಿ ನಡೆಸಿ ಇಂಚಿಂಚು ಶೋಧ ಆರಂಭಿಸಿದ್ದಾರೆ.

  •  ಜನಾರ್ಧನರೆಡ್ಡಿ ಡೀಲ್ ಪ್ರಕರಣ.
  •  ಮುಂಜಾನೆಯಿಂದಲೇ ಬಳ್ಳಾರಿ ನಿವಾಸದ ಮೇಲೆ ದಾಳಿ.
  •  ಮಹತ್ವದ ದಾಖಲೆಪತ್ರ ವಶಪಡಿಸಿಕೊಂಡ ಪೊಲೀಸರು.
  •  ಮಂಜುನಾಥ್ ಚೌಧರಿ ನೇತೃತ್ವದಲ್ಲಿ 8 ಅಧಿಕಾರಿಗಳ ತಂಡದಿಂದ ಶೋಧ.
  •  ರೆಡ್ಡಿ ನಿವಾಸದಲ್ಲಿ ಆತಂಕ.
  •  ಶ್ರೀರಾಮುಲು, ಆಂಧ್ರದ ಮಾಜಿ ಶಾಸಕ ಕಾ.ಪು ರೆಡ್ಡಿ ಸೇರಿದಂತೆ ಹಲವು ರೆಡ್ಡಿ ನಿವಾಸಕ್ಕೆ ಆಗಮನ.
  •  ಪೊಲೀಸರಿಂದ ಮನೆಯ ಮೂಲೆ ಮೂಲೆ ಶೋಧ.

ಬೆಂಗಳೂರಿನ ಪಾರಿಜಾತ ನಿವಾಸದ ಮೇಲೆ ನಿನ್ನೆ ದಾಳಿ ನಡೆಸಿದ ಪೊಲೀಸರ ತಂಡ ಮಹತ್ವದ ದಾಖಲೆಪತ್ರಗಳೂ ಸೇರಿದಂತೆ ಹಲವು ಬೆಲೆ ಬಾಳುವ ವಸ್ತುಗಳ ಬಗ್ಗೆ ದಾಖಲೆಗಳನ್ನು ವಶಪಡಿಸಿಕೊಂಡ ಬೆನ್ನಲ್ಲೆ ಇಂದು ಬಳ್ಳಾರಿಯ ನಿವಾಸದಲ್ಲಿ ಸಿಸಿಬಿ ಅಧಿಕಾರಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ 8ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಶೋಧ ಆರಂಭಿಸಿದ್ದಾರೆ.

janardan-reddy-house

ಎರಡು ವಾಹನಗಳಲ್ಲಿ ಬೆಳಿಗ್ಗೆ ರೆಡ್ಡಿ ನಿವಾಸಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಆರಂಭಿಸುತ್ತಿದ್ದಂತೆ ಆಪ್ತ ಹಾಗೂ ಶಾಸಕ ಬಿ. ಶ್ರೀರಾಮುಲು, ಜನಾರ್ಧನರೆಡ್ಡಿ ಮಾವ ಪರಮೇಶ್ವರ್ ರೆಡ್ಡಿ, ಆಂಧ್ರದ ಮಾಜಿ ಶಾಸಕ ಕಾ.ಪು ರಾಮಚಂದ್ರರೆಡ್ಡಿ ಸೇರಿದಂತೆ ರೆಡ್ಡಿಯ ಸಂಬಂಧಿಕರ ಸಮ್ಮುಖದಲ್ಲಿ ಮನೆಯ ಗೋಡೆ ಗೋಡೆಗಳನ್ನು ಅಧಿಕಾರಿಗಳ ತಂಡ ಪರಿಶೀಲನೆಯಲ್ಲಿ ನಿರತರಾಗಿದೆ.

ಮನೆಯಲ್ಲಿರುವ ಸಿಸಿ ಟಿವಿ ಸೇರಿದಂತೆ ಇನ್ನಿತರೆ ಮಹತ್ವದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಲೇರೋ ಇನ್ನೋವಾ ವಾಹನದಲ್ಲಿ ನಕುಸಿನಲ್ಲೇ ರೆಡ್ಡಿಯ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಕುಟುಂಬದ ಸದಸ್ಯರು ಎದ್ದು ಕಣ್ಣು ಬಿಡುವುದರೊಳಗಾಗಿ ಮನೆಯೊಳಗೆ ಸಿಸಿಬಿ ಅಧಿಕಾರಿಗಳು ಪ್ರವೇಶಿಸಿದರು. ಇದರಿಂದಾಗಿ ರೆಡ್ಡಿ ನಿವಾಸದಲ್ಲಿ ದಿಗಿಲು ಮತ್ತು ಮೌನ ಆವರಿಸಿದೆ. ಈ ನಡುವೆ ಪರಾರಿಯಾಗಿರುವ ಜನಾರ್ಧನರೆಡ್ಡಿ ಅವರಿಗಾಗಿ ಶೋಧ ಮುಂದುವರೆಸಿದೆ.

ಈ ನಡುವೆ ಬೆಂಗಳೂರಿನ ತಾಜ್ ವೆಸ್ಟೆಎಂಡ್‌ನಲ್ಲಿ ಡೀಲ್ ನ‌ಡೆಸಿದ ಸ್ಥಳ ಪರಿಶೀಲನೆ ನಡೆಸಿದ ಸಿಸಿಬಿ ಅಧಿಕಾರಿಗಳು ಘಟನೆಯ ಸಂಬಂಧ ಮಹಜರು ನಡೆಸಿ ಇಂಚಿಂಚು ಮಾಹಿತಿ ಪಡೆದರು.

ನಿನ್ನೆ ದಾಳಿಯ ಸಂದರ್ಭದಲ್ಲಿ ಪಾರಿಜಾತ ನಿವಾಸದಲ್ಲಿ ಎರಡು ಮಹತ್ವದ ದಾಖಲೆಗಳು ದೊರೆತಿರುವ ಹಿನ್ನೆಲೆಯಲ್ಲಿ ಅದರ ಪರಿಶೀಲನೆಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಿಸಿಬಿ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ದಾಖಲೆಗಳಲ್ಲಿ ರೆಡ್ಡಿ ಡೀಲ್ ನಡೆಸಿರುವ ಮಾಹಿತಿ ಇದೆ ಎನ್ನಲಾಗಿದೆ.

ಆಂಬಿಡೆಂಟ್ ಕಂಪನಿಯ ಮುಖಾಂತರ ಅಮಾನ್ಯಗೊಂಡಿದ್ದ ಹಳೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವ ಸಂಬಂಧ 57 ಕೆಜಿ ಚಿನ್ನ ಖರೀದಿ ಸಂಬಂಧಿಸಿದಂತೆ ಜನಾರ್ಧನರೆಡ್ಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಲ್ಲದೆ ಆಂಬಿಡೆಂಟ್ ಕಂಪನಿಯ ಫರೀದ್ ಪ್ರಕರಣದಲ್ಲಿ ಇಡಿ ವಶಪಡಿಸಿಕೊಂಡಿದ್ದ ಹಣವನ್ನು ಬಿಡಿಸಿಕೊಳ್ಳಲು ರೆಡ್ಡಿ ಆಪ್ತ ಅಲಿಖಾನ್ ಮೂಲಕ 20 ಕೋಟಿ ರೂ.ಗಳ ಡೀಲ್ ಪಡೆದಿದ್ದರು. ಅದರಲ್ಲಿ 2 ಕೋಟಿ ನಗದು, ಉಳಿದ 18 ಕೋಟಿ ರೂ.ಗೆ 57 ಕೆಜಿ ಚಿನ್ನ ನೀಡುವಂತೆ ಸೂಚಿಸಿದ್ದರು ಎನ್ನ ಲಾಗಿದೆ.

ಸಿಸಿಬಿ ಅಧಿಕಾರಿಗಳು ಜನಾರ್ಧನರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸುತ್ತಿದ್ದಂತೆ ಪ್ರಕರಣದ ಆರೋಪಿಗಳಲ್ಲೊಬ್ಬರಾಗಿರುವ ಸುವರ್ಣ ಜ್ಯುವೆಲಱ್ಸ್‌ನ ಮಾಲೀಕ ರಮೇಶ್ ಅವರನ್ನು ಸಿಸಿಬಿ ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿರುವ ಹಿನ್ನೆಲೆಯಲ್ಲಿ ಆಭರಣ ಅಂಗಡಿಗೆ ಹಬ್ಬದ ನೆಪದಲ್ಲಿ ಬೀಗ ಹಾಕಲಾಗಿದೆ.

ನಿರೀಕ್ಷಣಾ ಜಾಮೀನು

ಡೀಲ್ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ಧನರೆಡ್ಡಿ ಪರಾರಿಯಾಗಿದ್ದು, ಈ ಸಂಬಂಧ ರೆಡ್ಡಿ ಪರ ವಕೀಲರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಲು ಮುಂದಾಗಿದ್ದಾರೆ.

ಜನಾರ್ಧನರೆಡ್ಡಿ ಅವರನ್ನು ಈ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿ ಹಾಕಿಸುವ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ಕಾನೂನಿನ ಪ್ರಕಾರ ಹೋರಾಡುವುದಾಗಿ ರೆಡ್ಡಿ ಪರ ವಕೀಲರು ತಿಳಿಸಿದ್ದಾರೆ.

ವಿದೇಶದಲ್ಲೂ ಕಂಪನಿ

ಸಾರ್ವಜನಿಕರಿಗೆ ನೂರಾರು ಕೋಟಿ ವಂಚಿಸಿರುವ ಆಂಬಿಡೆಂಟ್ ಕಂಪನಿ ದುಬೈನಲ್ಲಿ‌ ಅಕ್ರಮ ಹಣ ವರ್ಗಾವಣೆಗೆ ಕಂಪನಿ ಆರಂಭಿಸಿರುವುದು ಸಿಸಿಬಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಸಂಗ್ರಹಿಸಿರುವ ನೂರಾರು ಕೋಟಿ ರೂ. ಹಣ ಬದಲಾವಣೆಯ ಉದ್ದೇಶದಿಂದ ಕಳೆದ ಜನವರಿಯಲ್ಲಿ ಕಂಪನಿ ತೆರೆಯುವುದು ಬೆಳಕಿಗೆ ಬಂದಿದೆ.

ಜನ ನಂಬಲ್ಲ

ಮಾಜಿ ಸಚಿವ ಜನಾರ್ಧನರೆಡ್ಡಿ ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದರೆ ಜನ ನಂಬುವುದಿಲ್ಲ. ಜನಾರ್ಧನರೆಡ್ಡಿಯನ್ನು ಮುಂದಿಟ್ಟುಕೊಂಡೇ ಬಿಜೆಪಿ ಆಟವಾಡುತ್ತಿದೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಇಂದಿಲ್ಲಿ ಆರೋಪಿಸಿದ್ದಾರೆ.

ಜನಾರ್ಧನರೆಡ್ಡಿ ಮತ್ತು ಬಿಜೆಪಿ ಜನರನ್ನು ವಂಚಿಸುವ ಕೆಲಸ ಮಾಡುತ್ತಿದೆ. ಅದು ಹೆಚ್ಚು ದಿನ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

Leave a Comment