ರೆಡಿಮೇಡ್ ಉತ್ತರಗಳಿಗಿಂತ ಸ್ವಂತ ಉತ್ತರ ಶೋಧಿಸಲು ಬಿಡಿ: ಕರ್ಜಗಿ

ಧಾರವಾಡ, ಸೆ 23- ‘ಶಿಕ್ಷಕರಾದವರು ವಿದ್ಯಾರ್ಥಿಗಳಲ್ಲಿ ಹೊಸ ಹೊಸ ಉತ್ತರಗಳನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ ಬೋಧಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಕ್ರಿಯೇಟಿವ್ ಅಕಾಡೆಮಿ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ ಸಲಹೆ ನೀಡಿದರು.
ಭಾನುವಾರ ನಗರದ ಕೆ.ಇ.ಬೋರ್ಡ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಶಿಕ್ಷಕರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಜಗತ್ತಿನಲ್ಲಿ ನಿತ್ಯ ತನ್ನದೇಯಾದ ಬದಲಾವಣೆ ಸಾಮಾನ್ಯವಾಗಿದೆ. ಆ ಬದಲಾವಣೆ ಗಳಿಗೆ ಅನುಗುಣವಾಗಿ ಶಿಕ್ಷಕರು ಸಹ ವಿದ್ಯಾರ್ಥಿಗಳ ಮನಸ್ಥಿತಿ ಅರಿತು ವಿಷಯ ತಿಳಿಸಬೇಕು. ಅಂತೆಯೇ ಹಳೆ ತಲೆಮಾರಿನ ವಿಷಯಗಳ ಜೊತೆಗೆ ಹೊಸ ತಲೆಮಾರಿನ ತಂತ್ರಜ್ಞಾನದ ಅವಿಷ್ಕಾರಗಳನ್ನು ಸಾಧ್ಯವಾದಷ್ಟು ಮೈಗೂಡಿಸಿ ಕೊಳ್ಳಬೇಕು. ಅದೆ ಹಳೆಯ ಉತ್ತರಗಳನ್ನೆ ಪರಿಗಣಿಸಿದೆ ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕವಾಗಿ ಹೊಸ ವ್ಯಾಖ್ಯಾನಗಳನ್ನು ನೀಡವಂತ ವಾತಾವರಣ ಸೃಷ್ಟಿಸಬೇಕು ಎಂದರು.
ಕಳೆದ 25 ವರ್ಷಗಳ ಹಿಂದೆ ಇದ್ದ ವಾತಾವರಣ ಈಗ ಇಲ್ಲ. ಈಚೆಗಿನ ಏಳೆಂಟು ವರ್ಷಗಳಲ್ಲಿ ಮೊಬೈಲ್‌ನ ಬಳಕೆ ಹೆಚ್ಚಿದೆ. ಇದರಲ್ಲಿ ಮೊಬೈಲ್‌ನ ಬಳಕೆ ಒಂದೆಡೆ ತುಂಬಾ ಅನುಕೂಲಕರ ವಾಗಿದ್ದರೂ, ಇನ್ನೊಂದೆಡೆ ಅಷ್ಟೇ ಅಪಾಯಕಾರಿಯೂ ಆಗಿದೆ. ಆದರೆ, ಅದರಿಂದ ನಮಗೆ ಬೇಕಾದಷ್ಟು ಕೆಲಸ ಮಾಡಿಕೊಂಡು ನಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಬೋಧನೆಯಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಇಲ್ಲ ಎನ್ನುವುದಕ್ಕಿಂತ, ಆಸಕ್ತಿ ಬರುವಂತೆ ಪಾಠ ಮಾಡುವುದು ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಗಳನ್ನು ಮಕ್ಕಳಂತೆ ಕಂಡು ಪ್ರೀತಿ, ವಿಶ್ವಾಸದಿಂದ ಕಾಣುವುದು ಕೂಡ ಒಂದು ಮುಖ್ಯ ಕಾರ್ಯವಾಗಿದೆ. ಅಷ್ಟೆ ಅಲ್ಲದೇ ಇಂದು ಅಂಗೈನಲ್ಲೆ ಎಲ್ಲ ಮಾಹಿತಿಗಳು ದೊರೆಯುತ್ತಿರುವ ಕಾರಣ ಇಂದು ಸಂಶೋಧನಾ ಪ್ರವೃತ್ತಿ ಕುಗ್ಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಅರವಿಂದ ಗಂಭೀರ ಅವರು ಮಾತನಾಡಿ, ಮಾಹಿತಿ-ತಂತ್ರಜ್ಞಾನದ ಸಹಾಯದಿಂದ ಇನ್ನೂ ಹೆಚ್ಚಿನ ಮಟ್ಟದ ಬೋಧನೆ ಮಾಡಬಹುದು. ವಿದ್ಯಾರ್ಥಿಗಳಲ್ಲಿ ಕುತೂಹಲ ಕೆರಳಿಸುವ ವಿಷಯಗಳನ್ನು ಚರ್ಚೆಯ ಮೂಲಕ ಹೇಳುವುದು, ವಿದ್ಯಾರ್ಥಿಗಳಿಗೆ ಮಾತನಾಡಲು ಅವಕಾಶ ಕಲ್ಪಿಸುವುದು ಮುಖ್ಯವಾಗಿದೆ ಎಂದು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಟಿ. ನಾರಾಯಣ ಭಟ್ ಮಾತನಾಡಿ, ಶಿಕ್ಷಕ ಪೋಷಕನಾಗಬೇಕು, ಪೋಷಕ ಶಿಕ್ಷಕನಾಗಬೇಕು. ಅಂದಾಗಲೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ವಿಶೇಷ ಕಾಳಜಿ ಇರಬೇಕು. ಮಕ್ಕಳೊಂದಿಗೆ ಆತ್ಮಿಯತೆ ಬೆಳೆಸಿಕೊಳ್ಳುವ ಮೂಲಕ ಆತನಿಗೆ ಅಧ್ಯಯನದ ಕುರಿತು ಹೇಳಬೇಕು. ಕಲಿಸುವ ಶಿಕ್ಷಕ ಉತ್ಸುಕ ನಾಗಿದ್ದಾಗ ವಿದ್ಯಾರ್ಥಿಗಳಲ್ಲಿ ಕಲಿಯುವ ಹಂಬಲ ದ್ವಿಗುಣಗೊಳ್ಳುತ್ತದೆ. ಶಿಕ್ಷಕರು ಸದಾ ಕ್ರಿಯಾಶೀಲರಾಗಿ ಕಾರ‍್ಯ ನಿರ್ವಹಿಸಬೇಕು. ಪ್ರಶಸ್ತಿ-ಪುರಸ್ಕಾರಗಳ ಬೆನ್ನು ಹತ್ತುವ ಬದಲು ಆತ್ಮ ಸಂತೋಷದಿಂದ ಕೆಲಸ ಮಾಡಬೇಕು. ಅಂದಾಗ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆ ನೀಡಲು ಸಾಧ್ಯ ಎಂದು ಹೇಳಿದರು.
ಮಧ್ಯಾಹ್ನದ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಶಿಕ್ಷಕರ ಮುಕ್ತ ಚರ್ಚೆ, ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಎಜ್ಯುಕೇಶನ್ ಬೋರ್ಡನ ಅಧ್ಯಕ್ಷ ಡಾ. ಅಶೋಕ ಚಚಡಿ, ಕಾರ್ಯಾಧ್ಯಕ್ಷ ಶ್ರೀ.ಅರುಣ ನಾಡಗೇರ, ಖಜಾಂಚಿ ಡಾ. ಶ್ರೀಕಾಂತ ಪೈ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಮ್.ಎ.ಸಿದ್ದಾಂತಿ, ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು, ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೆಲಗೇರಿ ಶಾಲೆಯ ಶಿಕ್ಷಕರಾದ ರಮ್ಯಾ ಉಪಾಧ್ಯಾಯ ಪ್ರಾರ್ಥನೆ, ಸಂಸ್ಥೆಯ ಖಜಾಂಚಿಯಾದ ಡಾ. ಶ್ರೀಕಾಂತ ಪೈ ಸ್ವಾಗತ, ಹಾಗೂ ಪ್ರೊ. ಎಂ ಎ ಸಿದ್ಧಾಂತಿ ವಂದಿಸಿದರು.  ಈಶ್ವರ ಕರಾತ ಮತ್ತು ಪ್ರೊ.ವಿದ್ಯಾ ಜಮಖಂಡಿ ನಿರೂಪಿಸಿದರು.

Leave a Comment