ರೆಕ್ಕೆ ಬಿಚ್ಚಿತು ಸಿನೆಮಾ ಆಸೆಯ ಹಕ್ಕಿ

ಈ ಹುಡ್ಗಿ ನಟಿಸ್ತಿರುವ ಧಾರವಾಹಿಯನ್ನು ನೋಡ್ತಿರ್‍ತೀನಿ ಅವ್ರ ನಟನೆಯ ಅಭಿಮಾನಿ ನಾನು ಎಂದು ದರ್ಶನ್ ಅವರಂತಹ ಸ್ಟಾರ್ ಹೇಳುತ್ತಿದ್ದರೆ ಆ ಹುಡ್ಗಿ ಅನುಷಾ ಕುಳಿತಲ್ಲೆ ಅನಿರೀಕ್ಷಿತ ರೋಮಾಂಚನಕ್ಕೆ ಒಳಗಾಗಿದ್ದಳು, ಆ ಸಮಾಂಭದಲ್ಲಿದ್ದ ನಿರ್ದೇಶಕ ಮಹೇಂದರ್ ದರ್ಶನ್ ಮಾತು ಕೇಳಿದ್ದರಿಂದಲೋ ಏನೋ ತಮ್ಮ ಹೊಸ ಚಿತ್ರ ಒನ್ಸ್ ಮೋರ್ ಕೌರವದ ನಾಯಕಿಯಾಗಲು ಅನುಷಾನ ಕರೆಸಿಕೊಂಡರು.
ದರ್ಶನ್ ಮಾತು ಒಂದು ಕಡೆ ಪ್ರಭಾವ ಬೀರಿದ್ದರೂ ಮಹೇಂದರ್ ಅವರಿಗೆ ಗೋಕುಲದಲ್ಲಿ ಸೀತೆ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಅನುಷಾಳ ನಟನೆಯೂ ಇಷ್ಟವಾಗಿತ್ತು. ಅಲ್ಲದೆ ಹಳ್ಳಿಯ ಕಥೆ ಇರುವ ಒನ್ಸ್‌ಮೋರ್ ಕೌರವನಿಗೆ ಇಂಥ ಹುಡುಗಿಯೇ ಬೇಕಾಗಿತ್ತು. ಈ ಕಾರಣಕ್ಕೆ ತಮ್ಮ ಚಿತ್ರಕ್ಕೆ ಈ ಹುಡುಗಿ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಮಹೇಂದರ್ ತಮ್ಮ ಎಂದಿನ ದೊಡ್ಡತನದಲ್ಲಿ ಹೇಳಿದರೆ ಅನುಷಾ ತಾನು ಹೆಚ್ಚು ಲಕ್ಕಿ ಎನ್ನುವ ಹರ್ಷದಲ್ಲಿದ್ದಾಳೆ.

ಆದರೆ ಇಲ್ಲಿ ಯಾರು ಎಷ್ಟು ಅದೃಷ್ಟಶಾಲಿಗಳು ಎನ್ನುವುದು ಕೌರವ ಚಿತ್ರಕ್ಕೆ ಪ್ರೇಕ್ಷಕರು ಕೊಡುವ ಫಲಿತಾಂಶದಿಂದ ಗೊತ್ತಾಗಲಿದೆ. ಆದರೆ ಒಂದಂತು ಸತ್ಯ ಮಹೇಂದರ್ ಕೊಟ್ಟಿರುವ ಅವಕಾಶದಿಂದಾಗಿ ಸಿನೆಮಾದಲ್ಲಿಯೇ ವೃತ್ತಿ ಬದುಕು ಕಟ್ಟಿಕೊಳ್ಳಬೇಕೆನ್ನುವ ಅನುಷಾಳ ಆಸೆಗೆ ಹೊಸ ರೆಕ್ಕೆ ಮೂಡಿದೆ.
ಇಂಜೀಯರಿಂಗ್ ಓದಿರುವ ಈ ಹುಡುಗಿಗೆ ಕೌರವ ಎರಡನೇ ಚಿತ್ರ. ಸಿನೆಮಾ ನಟಿಯಾಗಬೇಕೆನ್ನುವ ಕನಸು ಇದ್ದಿದ್ದರಿಂದಾಗಿ ಮೊದಲು ಆಯ್ಕೆ ಮಾಡಿಕೊಂಡಿದ್ದು ಸೋಡಬುಡ್ಡಿ ಚಿತ್ರವೇ ಆಗಿತ್ತು. ಆದರೆ ಅದರ ಜೊತೆಯಲ್ಲಿ ಒಪ್ಪಿಕೊಂಡಿದ್ದ ಧಾರಾವಾಹಿ ಮೊದಲು ಪ್ರಸಾರವಾಗಿ ಕಿರುತೆರೆಯ ಮೂಲಕ ಕನ್ನಡಿಗರಿಗೆ ಪರಿಚಿತಳಾದಳು. ಧಾರಾವಾಹಿ ಸುಮಾರು ಒಂದು ವರ್ಷಗಳ ಕಾಲ ಪ್ರಸಾರವಾಗಿ ಅನುಷಾ ಎಲ್ಲೇ ಹೋಗಲಿ ಜನ ಗುರುತಿಸಿ ಪ್ರೀತಿಯಿಂದ ಮಾತನಾಡಿಸುವಂತಾಯಿತು.

ಆಗಿನ ಬಿಗ್ ಬಾಸ್ ಆರಂಭವಾಗುತ್ತದೆ ಎನ್ನುವ ಕಾರಣಕ್ಕೆ ಅವಳ ಧಾರಾವಾಹಿಯನ್ನು ಅವಸರದಲ್ಲಿ ಪೂರ್ಣಗೊಳಿಸಲಾಯಿತು. ಅದೇ ಸಮಯಕ್ಕೆ ಸೋಡಬುಡ್ಡಿ ತೆರೆಕಂಡಿತು ಜನರಿಂದ ಚಿತ್ರಕ್ಕೆ ಮತ್ತು ಅವಳ ನಟನೆಗೆ ಮೆಚ್ಚುಗೆ ವ್ಯಕ್ತವೂ ಆಯಿತು. ಅದರೆ ಚಿತ್ರಕ್ಕೆ ನಿರೀಕ್ಷಿತ ಸಕ್ಸಸ್ ಸಿಗಲಿಲ್ಲ ಅನುಷಾಗೆ ಒಳ್ಳೊಳ್ಳೆ ಅವಕಾಶಗಳೂ ಬರಲಿಲ್ಲ. ಅಷ್ಟಕ್ಕೂ ಹುಡುಗಿ ಸೋಡಬುಡ್ಡಿ ನಂತರ ಸಿನೆಮಾಗಳ ಆಯ್ಕೆಯಲ್ಲಿ ತುಂಬಾನೇ ಚೂಜಿ ಆಗಿಬಿಟ್ಟಳು.

ಈ ಕಾರಣದಿಂದಾಗಿ ಸ್ವಲ್ಪ ಕಾಲ ಒಳ್ಳೆ ಕಥೆಗಾಗಿ ಕಾಯಬೇಕಾಯಿತು ಅದಕ್ಕೆ ಬೇಸರಿಸಿಕೊಳ್ಳಲಿಲ್ಲ. ಇಂಜೀನಿಯರಿಂಗ್‌ನಲ್ಲಿ ಉತ್ತಮ ಅಂಕಗಳಿಸಿದ್ದರೂ ಕೆಲಸಕ್ಕಾಗಿ ಒಂದು ಸಂದರ್ಶನಕ್ಕೂ ಹೋಗಲಿಲ್ಲ. ಇದರ ನಡುವೆ ಇನ್ನೂ ಹೆಸರಿಡದ ಹೊಸಬರ ಚಿತ್ರದ ಕಥೆ ಇಷ್ಟವಾಗಿ ನಟಿಸಿದ್ದಾಳೆ ಅದು ಪೂರ್ಣಗೊಳ್ಳುವ ಹಂತದಲ್ಲಿದೆ. ಮಧ್ಯದಲ್ಲಿ ಲೈಫ್ ೩೬೦ ಚಿತ್ರದಲ್ಲಿ ಪಾತ್ರ ಇಷ್ಟವಾಗಿ ನಟಿಸಿದ್ದೂ ಆಗಿದೆ. ಸೋಲೋ ಗೆಲುವೋ ಏನಿದ್ದರೂ ಚಿತ್ರರಂಗದಲ್ಲೇ ಎನ್ನುವ ಹಠಕ್ಕೆ ಬಿದ್ದಿದ್ದಾಳೆ.

ಇದಕ್ಕೆ ತಕ್ಕಂತೆ ಕೌರವ ಚಿತ್ರ ಸಿಕ್ಕಿದೆ ಅಲ್ಲಿಂದ ತನ್ನ ಪ್ರತಿಭೆಗೆ ತಕ್ಕಂತೆ ಅವಕಾಶಗಳು ಸಿಕ್ಕೇ ಸಿಗುತ್ತವೆ ಎನ್ನುವ ಕಾತುರದ ನಿರೀಕ್ಷೆಯಲ್ಲಂತು ಇದ್ದಾಳೆ.
-ಕೆ.ಬಿ. ಪಂಕಜ

Leave a Comment