ರೂ. 500ರ ನೋಟು ಮುದ್ರಣ ಹೆಚ್ಚಳ ನೋಟು ಕೊರತೆ ತಗ್ಗಿಸಲು 3 ಪಟ್ಟು ಏರಿಸಲು ಕ್ರಮ

ನಾಶಿಕ್, ಡಿ. ೨೪ – ನೋಟು ರದ್ಧತಿ ಘೋಷಣೆಯ ನಂತರ ಉಂಟಾಗಿರುವ ನೋಟುಗಳ ಕೊರತೆಯನ್ನು ಸರಿಗಟ್ಟಲು ಇಲ್ಲಿನ ನೋಟು ಮುದ್ರಣಾಲಯದಲ್ಲಿ 500 ರೂ. ನೋಟುಗಳ ಮುದ್ರಣವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ.

ಈವರೆಗೆ ದಿನಕ್ಕೆ 35 ಲಕ್ಷ ನೋಟುಗಳನ್ನು ನವೆಂಬರ್‌ನಲ್ಲಿ ಮುದ್ರಿಸಲಾಗುತ್ತಿದ್ದು, ಈಗ ಅದನ್ನು ದಿನಕ್ಕೆ 1 ಕೋಟಿ ನೋಟುಗಳಿಗೆ ಹೆಚ್ಚಿಸಲಾಗಿದೆ.

ಒಟ್ಟಾರೆ ಕಳೆದ ಶುಕ್ರವಾರ 4 ಕೋಟಿ 30 ಲಕ್ಷ ನೋಟುಗಳನ್ನು ಆರ್‌ಬಿಐಗೆ ಕಳಿಸಲಾಗಿದೆ.

500 ರೂ. ನೋಟುಗಳಲ್ಲದೆ, 100, 50 ಮತ್ತು 20 ರೂ. ಮುಖಬೆಲೆಯ ನೋಟುಗಳನ್ನೂ ಮುದ್ರಿಸಲಾಗುತ್ತಿದೆ ಎಂದೂ ಮುದ್ರಣಾಲಯದ ಮೂಲಗಳು ತಿಳಿಸಿವೆ.

ನವೆಂಬರ್ 11 ರಂದು 500 ರೂ.ಗಳ ಕೇವಲ 50 ಲಕ್ಷ ನೋಟುಗಳನ್ನು ಮುದ್ರಿಸಲಾಗಿತ್ತು. ಕಳೆದ 43 ದಿನಗಳಲ್ಲಿ 82 ಕೋಟಿ 80 ಲಕ್ಷ ವಿವಿಧ ಮೌಲ್ಯಗಳ ನೋಟುಗಳನ್ನು ಮುದ್ರಿಸಲಾಗಿದೆ.

ಇವುಗಳಲ್ಲಿ 25 ಕೋಟಿ 500 ರೂ. ನೋಟುಗಳು, ಕಳೆದ 3 ದಿನಗಳಲ್ಲಿ ಮುದ್ರಣಾಲಯ 8 ಕೋಟಿ 30 ಲಕ್ಷ ನೋಟುಗಳನ್ನು ರವಾನೆ ಮಾಡಿದ್ದು, ಅವುಗಳಲ್ಲಿ 3 ಕೋಟಿ 75 ಲಕ್ಷ ನೋಟುಗಳು 500 ರೂ.ಗಳವು.

ಜನವರಿ 31ರ ವರೆಗೆ 80 ಕೋಟಿ ಕರೆನ್ಸಿ ನೋಟುಗಳನ್ನು ಮುದ್ರಿಸುವ ಗುರಿಯಿದೆ. ಅದರಲ್ಲಿ ಅರ್ಧದಷ್ಟು 500 ರೂ. ನೋಟುಗಳಾಗಿರಲಿವೆ.

ದೇಶದಲ್ಲಿ ನೋಟು ಮುದ್ರಿಸುವ 4 ಮುದ್ರಣಾಲಯಗಳು ಮಾತ್ರ ಇವೆ. ಇವುಗಳಲ್ಲಿ ಆರ್‌ಬಿಐಗೆ ಸೇರಿದ ಎರಡು ಕರ್ನಾಟಕ ಮತ್ತು ಬಂಗಾಳದ ಸಲ್ಬೋನಿ ಎಂಬಲ್ಲಿವೆ. ಉಳಿದೆರಡು ನಾಶಿಕ್ ಮತ್ತು ದೇವಾಸ್ ಎಂಬಲ್ಲಿವೆ.

ಈ ಮುದ್ರಣಾಲಯಗಳ ಕೆಲಸಗಾರರು ಭಾನುವಾರ ರಜೆ ತೆಗೆದುಕೊಳ್ಳುತ್ತಿಲ್ಲ. ಊಟ ತಿಂಡಿಗೂ ಬಿಡುವು ಪಡೆಯದೆ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಇದೇ ಮೂಲಗಳು ತಿಳಿಸಿವೆ.

Leave a Comment