ರಿಲೆಯನ್ಸ್ ತೈಲ ಕಂಪನಿ ಹೂಡಿಕೆಗೆ ಮುಂದಾದ ಸೌದಿ

ಮುಂಬೈ, ಆ. ೧೨- ಮುಖೇಶ್ ಅಂಬಾನಿ ಅವರ ನೇತೃತ್ವದ ರಿಲೆಯನ್ಸ್ ಇಂಡಸ್ಟ್ರೀಸ್ ತೈಲ ಶುದ್ಧೀಕರಣ ಮತ್ತು ರಾಸಾಯನಿಕ ಉದ್ಯಮದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪರ್ವ ಆರಂಭವಾಗಿದೆ. ಇವರ ತೈಲ ಶುದ್ಧೀಕರಣ ಮತ್ತು ಚಿಲ್ಲರೆ ತೈಲ ಮಾರಾಟ ಉದ್ಯಮದಲ್ಲಿ ಸಹಯೋಗದಲ್ಲಿ ಬಂಡವಾಳ ಹೂಡಲು ಸೌದಿ ಅರೇಬಿಯಾ, ಅರಬ್ ಎಮಿರೇಟ್ಸ್ ಮತ್ತು ಬ್ರಿಟನ್‌ನ ಇಂಧನ ಕಂಪನಿಗಳು ಮುಂದೆಬಂದಿವೆ.
ರಿಲೆಯನ್ಸ್ ತೈಲ ಶುದ್ಧೀಕರಣ ಮತ್ತು ರಾಸಾಯನಿಕ ಉದ್ಯಮದಲ್ಲಿ ಜಂಟಿ ಸಹಭಾಗಿತ್ವ ಪಡೆಯಲು ಸೌದಿ ಅರೇಬಿಯಾ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಯಾದ ಅರಾಮ್ಕೋ 75 ಶತಕೋಟಿ ಡಾಲಱ್ಸ್ ಮೊತ್ತದ ಹೂಡಿಕೆಯೊಂದಿಗೆ ಶೇ. 20 ರಷ್ಟು ಷೇರುಗಳನ್ನು ಕೊಳ್ಳಲು ರಿಲೆಯನ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಸೌದಿ ಅರೇಬಿಯಾ ತೈಲ ಸಂಸ್ಥೆ, ರಿಲೆಯನ್ಸ್ ತೈಲ ಸಂಸ್ಥೆಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿರುವುದನ್ನು ಸಂಸ್ಥೆಯ 42ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ, ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಖಚಿತಪಡಿಸಿದ್ದಾರೆ. ‘ಸೌದಿ ಅರೇಬಿಯಾದ ಅರಾಮ್ಕೋ ಸಂಸ್ಥೆ ತಮ್ಮ ತೈಲ ಶುದ್ಧೀಕರಣ ಸಂಸ್ಥೆಯಲ್ಲಿ 5,32,466 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದ್ದು, ಇದು ಸಂಸ್ಥೆಯ ಇತಿಹಾಸದಲ್ಲಿಯೇ ದೊಡ್ಡ ಹೂಡಿಕೆಯಾಗಿದೆ’ ಎಂದು ಅಂಬಾನಿ ಸರ್ವಸದಸ್ಯರ ಸಭೆಯಲ್ಲಿ ಹೇಳಿದ್ದಾರೆ. ಈ ಒಡಂಬಡಿಕೆಯಂತೆ ಸೌದಿ ಅರೇಬಿಯಾದ ಅರಾಮ್ಕೋ ತೈಲ ಉತ್ಪಾದನಾ ಸಂಸ್ಥೆ, ಪ್ರತಿದಿನ 5000,000 ಕಚ್ಚಾತೈಲವನ್ನು ರಿಲೆಯನ್ಸ್ ತೈಲ ಶುದ್ಧೀಕರಣ ಸಂಸ್ಥೆಗೆ ಸರಬರಾಜು ಮಾಡುತ್ತದೆ.
ಇದೇ ವೇಳೆ ರಿಲೆಯನ್ಸ್ ಸಂಸ್ಥೆ ಹೆಚ್ಚಿನ ಪ್ರಮಾಣದಲ್ಲಿ ತೈಲ ರಫ್ತಿನ ಗುರಿಯನ್ನು ಹೊಂದಿದ್ದು, ವಿದೇಶಿ ಹೂಡಿಕೆಯಿಂದ ತನ್ನ ತೈಲ ರಫ್ತು ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಯೋಜಿಸಿದೆ. ಸದ್ಯಕ್ಕೆ ರಿಲೆಯನ್ಸ್ ಸಂಸ್ಥೆ 32.2 ದಶಲಕ್ಷ ಟನ್‌ಗಳಷ್ಟು ರಫ್ತು ಮಾಡುತ್ತಿದ್ದು, ಈ ಪ್ರಮಾಣವನ್ನು 41 ದಶಲಕ್ಷ ಟನ್‌ಗೆ ಏರಿಕೆ ಮಾಡುವುದು ಸಂಸ್ಥೆಯ ಗುರಿಯಾಗಿದೆ. ಅದಕ್ಕಾಗಿ ಹೊಸ ತೈಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ಮುಂದಾಗಿದೆ.
ಇದೇ ವೇಳೆ ಬ್ರಿಟನ್‌ನ ದೈತ್ಯ ಇಂಧನ ಸಂಸ್ಥೆಯಾದ ಬಿಪಿ ರಿಲೆಯನ್ಸ್ ಇಂಡಸ್ಟ್ರೀಸ್‌ನ ಚಿಲ್ಲರೆ ಇಂಧನ ಮಾರಾಟ ಉದ್ಯಮದಲ್ಲಿ 7 ಸಾವಿರ ಕೋಟಿಯಷ್ಟು ಹೂಡಿಕೆ ಮಾಡಲು ಮುಂದಾಗಿದೆ ಎಂದೂ ಮುಖೇಶ್ ಅಂಬಾನಿ ಸಂಸ್ಥೆಯ 42ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಹೇಳಿದ್ದಾರೆ.

Leave a Comment