ರಿಮ್ಸ್ ಮತ್ತೊಂದು ವಿವಾದ : ರೋಗಿಗಳ ಕೋಣೆ – ಗ್ಯಾಸ್ ವೆಲ್ಡಿಂಗ್

ರಾಯಚೂರು.ಅ.20- ವಿವಿಧ ರೋಗಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವಾರ್ಡಿನಲ್ಲಿಯೇ ಅತ್ಯಂತ ಅಪಾಯಕಾರಿ ಗ್ಯಾಸ್ ವೆಲ್ಡಿಂಗ್ ಕಾಮಗಾರಿ ಕೈಗೊಳ್ಳುತ್ತಿರುವುದು ರಿಮ್ಸ್ ಆಸ್ಪತ್ರೆಯ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ನೀಡಬೇಕಾದ ವೈದ್ಯರು, ಏಕವಾಗಿ ಒಳ ರೋಗಿಗಳ ವಾರ್ಡ್‌ಗಳಲ್ಲಿ ಗ್ಯಾಸ್ ವೆಲ್ಡಿಂಗ್‌ನಂತಹ ಅಪಾಯಕಾರಿ ಕಾಮಗಾರಿ ಕೈಗೊಂಡಿರುವುದು ರಿಮ್ಸ್ ಆಸ್ಪತ್ರೆಯಲ್ಲಿರುವುದು ವೈದ್ಯರೋ ಅಥವಾ ಅಲ್ಲವೋ ಎನ್ನುವ ಅನುಮಾನಕ್ಕೆಡೆ ಮಾಡುವಂತೆ ಮಾಡಿದೆ. ವೆಲ್ಡಿಂಗ್ ಕಾಮಗಾರಿ ಕೈಗೊಳ್ಳುವ ಸ್ಥಳದಲ್ಲಿ ಸಾಮಾನ್ಯ ಎಚ್ಚರಿಕೆ ಕೈಗೊಳ್ಳುವ ಸ್ಥಳದಲ್ಲಿ ಭಾರೀ ಎಚ್ಚರಿಕೆ ವಹಿಸುವುದು ಸರ್ವೆ ಸಾಮಾನ್ಯ.
ಆದರೆ, ದುರಂತವೆಂದರೇ, ರೋಗಿಗಳಿರುವ ಕೋಣೆಯಲ್ಲಿಯೇ ಯಥಾರೀತಿ ವೆಲ್ಡಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಗ್ಯಾಸ್ ವೆಲ್ಡಿಂಗ್ ಸಂದರ್ಭದಲ್ಲಿ ಭಾರೀ ಪ್ರಮಾಣದ ಸದ್ದು ಮತ್ತು ಹೊಗೆ ಹೊರಸೂಸುತ್ತದೆ. ಅಲ್ಲದೇ, ಕಬ್ಬಿಣ ಸುಡುವ ವಾಸನೆಯೂ ಕೋಣೆಯನ್ನು ತುಂಬುತ್ತದೆ. ಇದರಿಂದ ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದ್ದರೂ, ವೈದ್ಯರು ಮಾತ್ರ ಕಿಂಚಿತ್ತು ಗಮನ ನೀಡುತ್ತಿಲ್ಲ.
ಇತ್ತೀಚಿಗಷ್ಟೇ ರಾಜ್ಯ ವೈದ್ಯಕೀಯ ಸಚಿವರಾದ ಶ್ರೀರಾಮುಲು ಅವರು, ರಿಮ್ಸ್ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದರು. ಅಂದು ಸಚಿವರು ಬಂದಾಗ ಏನೆಲ್ಲಾ ವ್ಯವಸ್ಥೆಗಳು ಕೈಗೊಳ್ಳಲಾಗಿತ್ತೋ ಅವರು ಹೋದ ನಂತರ ಏಕಾಏಕಿ ರೋಗಿಗಳ ಆರೈಕೆಯನ್ನೇ ವೈದ್ಯರು ಮರೆತಂತಿದೆ. ಆಸ್ಪತ್ರೆ ಅಕ್ಕಪಕ್ಕದಲ್ಲಿ ಯಾವುದೇ ಆರೋಗ್ಯಕ್ಕೆ ಮಾರಕವಾದ ಶಬ್ಧ ಮತ್ತು ಹೊಗೆ ಹೊರಸೂಸದಂತೆ ಎಚ್ಚರ ವಹಿಸಬೇಕೆಂಬ ನಿಯಮಗಳಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಬೆಲೆಯಿಲ್ಲದಂತಾಗಿದೆ.
ವೆಲ್ಡಿಂಗ್ ಕಾಮಗಾರಿಯಲ್ಲಿ ತೊಡಗಿದ ಕಾರ್ಮಿಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡ‌ ಕೆಲಸ ನಿರ್ವಹಿಸುತ್ತಿದ್ದಾರೆ. ದುರಂತವೆಂದರೇ, ರೋಗಿಗಳಿಗೆ ಮಾತ್ರ ಯಾವುದೇ ಮಾಸ್ಕ್ ನೀಡಲಾಗಿಲ್ಲ. ಆರೋಗ್ಯವಂತ ಕಾರ್ಮಿಕರು ಕೆಲಸ ಮಾಡುವಾಗ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸಿದ್ದರೇ, ಈಗಾಗಲೇ ವಿವಿಧ ಕಾಯಿಲೆಗಳಿಗೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಮಾತ್ರ ಗ್ಯಾಸ್ ವೆಲ್ಡಿಂಗ್ ಎಲ್ಲಾ ದುರ್ವಾಸನೆ ಮತ್ತು ಕಲುಷಿತ ಗಾಳಿಯನ್ನು ಸೇವಿಸಬೇಕಾದಂತಹ ಅನಿವಾರ್ಯತೆ ಆಸ್ಪತ್ರೆಯಲ್ಲಿದೆ.
ರಿಮ್ಸ್ ಆಸ್ಪತ್ರೆ ನಿರಂತರ ಒಂದಿಲ್ಲೊಂದು ವಿವಾದಗಳಿಗೆ ಗುರಿಯಾಗುತ್ತಲೇ ಬರುತ್ತಿದೆ. ಈಗ ರೋಗಿಗಳು ಚಿಕಿತ್ಸೆ ಪಡೆಯುವ ಕೋಣೆಯಲ್ಲಿಯೇ ವೆಲ್ಡಿಂಗ್ ವಿವಾದಕ್ಕೆ ಗುರಿಯಾಗುವಂತಾಗಿದೆ.

Leave a Comment