ರಿಕ್ಷಾ ಚಾಲಕನ ಮೇಲೆ ತಲವಾರು ದಾಳಿ

ಮಂಗಳೂರು, ಅ.೧೮- ನೀರುಮಾರ್ಗದ ಪಡು ಬಿತ್ತ್‌ಪಾದೆ ಸಮೀಪ ರಿಕ್ಷಾ ಚಾಲಕನ ಮೇಲೆ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ ಪರಾರಿಯಾದ ಘಟನೆ ನಿನ್ನೆ ಬೆಳಗ್ಗೆ ನಡೆದಿದೆ. ದೇವಸ್ಥಾನದಲ್ಲಿ ಮೋಜು-ಮಸ್ತಿ ವಿರೋಧಿಸಿದ್ದ ಹಿನ್ನೆಲೆಯಲ್ಲಿಯೇ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಕಾಪೆಟ್ಟು ಗುತ್ತಿಗೆ ನಿವಾಸಿ ಸಂತೋಷ್ (೩೫) ಗಾಯಗೊಂಡ ಯುವಕ. ಫರಂಗಿಪೇಟೆ ನಿವಾಸಿ ನಿತಿನ್ ಮತ್ತು ಪ್ರಾಣೇಶ್ ಹಲ್ಲೆಗೈದ ದುಷ್ಕರ್ಮಿಗಳು. ಇವರಿಬ್ಬರೂ ಸಂಘಟನೆಯೊಂದರ ಕಾರ್ಯಕರ್ತರಾಗಿದ್ದಾರೆ. ನಗರದ ಹೊರ ವಲಯದ ದೇವಸ್ಥಾನವೊಂದರಲ್ಲಿ ಬುಧವಾರ ನಾಲ್ವರು ಮದ್ಯ ಸೇವಿಸಿ ಮೋಜು-ಮಸ್ತಿ ನಡೆಸಿದ್ದರು. ಇದನ್ನು ನೋಡಿದ್ದ ಸಂತೋಷ್ ಅವರಿಗೆ ಹಿಗ್ಗಾಮುಗ್ಗಾ ಬೈದು ಕಳುಹಿಸಿದ್ದ. ಇದರಿಂದ ಕೋಪಗೊಂಡಿದ್ದ ದುಷ್ಕರ್ಮಿಗಳು ಸಂತೋಷ್ ಕೊಲೆಗೆ ಪ್ಲ್ಯಾನ್ ರೂಪಿಸಿದ್ದರು. ಗುರುವಾರ ಸಂಕ್ರಮಣವಾದ ಕಾರಣ ಸಂತೋಷ್ ಅವರು ಬಿತ್ತ್‌ಪಾದೆಯ ಅಂಗಡಿಯೊಂದರಲ್ಲಿ ಎಳ್ಳೆಣ್ಣೆ ಖರೀದಿಸಿ ತನ್ನ ಮನೆ ಗುತ್ತಿಗೆಯತ್ತ ರಿಕ್ಷಾದಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಆಕ್ಟೀವಾದಲ್ಲಿ ಬಂದ ಇಬ್ಬರು ಯುವಕರು ಸಂತೋಷ್‌ನನ್ನು ಅಡ್ಡಗಟ್ಟಿ ತಗಾದೆ ತೆಗೆದಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ತಾವು ತಂದಿದ್ದ ತಲವಾರಿನಿಂದ ಸಂತೋಷ್‌ಗೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂತೋಷ್ ಅವರ ಎರಡು ಕೈ ಹಾಗೂ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದೆ. ಘಟನೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು ಯುವಕ ರಕ್ತದ ಮಡುವಿನಲ್ಲಿ ಕುಸಿದು ಬಿದಿದ್ದ. ಗಾಯಗೊಂಡ ರಿಕ್ಷಾ ಚಾಲಕನನ್ನು ಸ್ಥಳೀಯರು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನಿಗೆ ಗಂಭೀರ ಗಾಯವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತೋಷ್, ನಿತಿನ್, ಪ್ರಾಣೇಶ್ ಮೂವರು ಆತ್ಮೀಯರಾಗಿದ್ದು, ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ ಎರಡು ವರ್ಷದ ಹಿಂದೆ ಸಂತೋಷ್ ಸಂಘಟನೆಯಿಂದ ದೂರ ಸರಿದು ತನ್ನ ಪಾಡಿಗೆ ತಾನಿದ್ದ. ಸಂಘಟನೆ ಬಿಟ್ಟ ಬಳಿಕ ಕೆಲವು ವಿಚಾರಗಳನ್ನು ಸಂತೋಷ್ ವಿರೋಧಿಸುತ್ತಿದ್ದ ಮತ್ತು ಈ ವಿಚಾರದಲ್ಲಿ ನಿತಿನ್ ಮತ್ತು ಸಂತೋಷ್ ಮಧ್ಯೆ ಹಲವು ಸಮಯದಿಂದ ವೈಮನಸ್ಸಿತ್ತು. ಗುರುವಾರ ಬೆಳಗ್ಗೆಯೂ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಇದಾದ ಸ್ವಲ್ಪ ಹೊತ್ತಿನ ಬಳಿಕ ಸಂತೋಷ್‌ನ ಮೇಲೆ ದಾಳಿ ನಡೆದಿದೆ. ಘಟನೆಯಿಂದಾಗಿ ಗಾಯಗೊಂಡ ಸಂತೋಷ್ ಸ್ಥಳದಲ್ಲಿಯೇ ಬಿದ್ದು ಒದ್ದಾಡುತ್ತಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ, ಸಂತೋಷ್‌ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳು ರೌಡಿಶೀಟರ್‌ಗಳು:
ಕೊಲೆಯತ್ನ ನಡೆಸಿದ ಆರೋಪಿಗಳಾದ ನಿತಿನ್ ಮತ್ತು ಪ್ರಾಣೇಶ್ ಅವರ ಮೇಲೆ ನಗರದ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ರೌಡಿಶೀಟರ್ ಹಿನ್ನಲೆ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment