ರಾಹುಲ್ ಸೋಲುವ ಭೀತಿ ಕಾಡುತ್ತಿದೆ : ಪ್ರಲ್ಹಾದ ಜೋಶಿ

ನವಲಗುಂದ,ಏ.15- ರಾಹುಲ್ ಗಾಂಧಿ ಸಂಸದರಾಗಿ ಚುನಾಯಿತರಾಗಿದ್ದ ತಾಯಿನಾಡಾದ ಅಮೇಥಿಯನ್ನು ಬಿಟ್ಟು ಈಗ ವಾಯನಾಡಿಗೆ ಬಂದಿದ್ದಾರೆ. ಅಮೇಥಿಯಲ್ಲಿ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಸಂಸದ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಇಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಬೃಹತ್ ರೋಡ್ ಶೋನಲ್ಲಿ ಭಾಗಿಯಾಗಿ, ಬಜಾರ್ ರೋಡನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ನೆರೆದಿದ್ದ ಜನಸ್ತೋಮನ್ನುದ್ದೇಶಿ ಅವರು ಮಾತನಾಡಿದರು.
ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿಕೊಂಡೇ ಅರವತ್ತು ವರ್ಷ ಅಧಿಕಾರ ನಡೆಸಿದವರು ಮತ್ತದೇ ಘೋಷಣೆಯನ್ನು ಮಾಡುತ್ತಿದ್ದಾರೆ. ಅವರು ನುಡಿದಂತೆ ನಡೆದಿದ್ದರೆ ದೇಶದ ಸ್ಥಿತಿ ಹೀಗಿರುತ್ತಿರಲಿಲ್ಲ. ಅವರೆಲ್ಲಾ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆದಾಗಷ್ಟೇ ಅಖಾಡಕ್ಕೆ ಬಂದು ಜನರಿಗೆ ಸುಳ್ಳು ಭರವಸೆಗಳ ಟೋಪಿ ಹಾಕಿ ಮತ್ತೆ ಗೆದ್ದು ವಿದೇಶಗಳಿಗೆ ಹೋಗಿ ವಿಶ್ರಾಂತಿ ಪಡೆಯುವ ಜಾಯಮಾನದವರು. ಮೋದಿ ಜೀ ಹೇಳಿದಂತೆ ಇವರೆಲ್ಲಾ ‘ನಾಮಧಾರರು’ ಮೋದಿಯವರಂತೆ ‘ಕಾಮಧರರಾಗಲು’ ಸಾಧ್ಯವಿಲ್ಲ ಎಂದು ಹೇಳಿದರು.
ಹಿಂದೊಮ್ಮೆ ನಮ್ಮ ತಪ್ಪಿನಿಂದಾಗಿ ವಾಜಪೇಯಿಯವರನ್ನು ಕಳೆದುಕೊಂಡಿದ್ದೇವೆ. ನಮ್ಮ ನಮ್ಮಲ್ಲೇ ಇದ್ದ ಒಳಮುನಿಸುಗಳಿಂದ ನನ್ನನ್ನೂ ಒಮ್ಮೆ ನೀವು ಕಳೆದುಕೊಂಡಿದ್ದೀರಿ, ಆಗ ನನ್ನ ಕ್ಷೇತ್ರ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ, ದುಷ್ಟರ ಆಡಳಿತದಲ್ಲಿ ಲಾಠಿ ಏಟು ತಿಂದಿದ್ದೆ. ಬಹಳ ನೋವು ಅನುಭವಿಸಿದ್ದೆ. ಆ ಒಂದು ಪ್ರತಿಕಾರವೆಂದೇ ನನ್ನನ್ನು ಅತ್ಯಂತ ಬಹುಮತದಿಂದ ಆರಿಸಿ ತಂದಿದ್ದೀರಿ- ಈಗ ಮತ್ತೊಮ್ಮೆ  ನಿಮ್ಮ  ಶಕ್ತಿ ತೋರಿಸಿ ಪ್ರಲ್ಹಾದ  ಜೋಶಿಯವರನ್ನು ಅತ್ಯಂತ ಬಹುಮತದಿಂದ ಆರಿಸಿ ತರಬೇಕಿದೆ ಎಂದು ಶಾಸಕರಾದ ಶಂಕರ್ ಪಾಟೀಲ ಮುನೇನಕೊಪ್ಪ ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ಪಾಟೀಲ್, ಸಿದ್ದನಗೌಡ ಪಾಟೀಲ್, ಷಣ್ಮುಖ ಗುರಿಕಾರ, ಮಾಂತೇಶ ಕಲಾಲ, ಎನ್.ಪಿ,. ಕುಲಕರ್ಣಿ, ಈರಣ್ಣಾ ಚವಡಿ, ನೀಲಮ್ಮಾ ಪಟ್ಟಣಶೆಟ್ಟಿ, ಎ.ಎಸ್. ಬಾಗಿ, ರಾಯನಗೌಡ ಪಾಟೀಲ, ಮಹದೇವಪ್ಪಾ ಶಿರೋಳ, ಅನ್ನಪೂರ್ನ ಜೋಶಿ, ಮುದಕಪ್ಪಾ ಕುಂಬಾರ, ಬಸವರಾಜ ಕಾತರಕಿ ಮತ್ತಿತರ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Leave a Comment