ರಾಹುಲ್ ವಿಕೆಟ್ ಕೀಪಿಂಗ್ ಗೆ ಮನಸೋತ ಕ್ಯಾಪ್ಟನ್ ಕೊಹ್ಲಿ

ಬೆಂಗಳೂರು, ಜ 20 – ನಿವೃತ್ತಿ ಅಂಚಿನಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಕೀಪಿಂಗ್ ಉತ್ತರಾಧಿಕಾರಿ ಎಂದೇ ರಿಷಭ್ ಪಂತ್ ಅವರಿಗೆ ಟೀಮ್ ಮ್ಯಾನೇಜ್ ಮೆಂಟ ಸಾಕಷ್ಟು ಸಹಕಾರ ನೀಡಿತ್ತು. ಆದಾಗ್ಯೂ, ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯುವ ವಿಕೆಟ್ ಕೀಪರ್ ವಿಫಲರಾದರು. ಆದರೆ, ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಪಂತ್ ಗಾಯಕ್ಕೊಳಗಾಗಿದ್ದರಿಂದ  ಬಯಸದ ಬಂದ ಭಾಗ್ಯವೆಂಬಂತೆ ವಿಕೆಟ್ ಕೀಪಿಂಗ್ ಮಾಡುವ ಜವಾಬ್ದಾರಿ ಪಡೆದ ಕನ್ನಡಿಗ ರಾಹುಲ್ ಎಲ್ಲರ ಗಮನ ಸೆಳೆದಿದ್ದಾರೆ.

ವಿಕೆಟ್ ಹಿಂದುಗಡೆ ರಾಹುಲ್ ಹೆಚ್ಚು ಪ್ರಭಾವಿ ಎನಿಸಿದ್ದಾರೆ. ಅಲ್ಲದೆ ಪಂದ್ಯದಿಂದ ಪಂದ್ಯಕ್ಕೆ ವಿಕೆಟ್ ಹಿಂದೆ ಕೌಶಲ್ಯದಲ್ಲಿ ಸುಧಾರಣೆಯನ್ನು ಕಂಡಿದ್ದಾರೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ತಂಡಕ್ಕೆ ಹೆಚ್ಚಿನ ಸಮತೋಲನ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಓಪನರ್ ಸ್ಥಾನಕ್ಕೆ ಶಿಖರ್ ಧವನ್ ಜೊತೆಗೆ ಪೈಪೋಟಿಗಿಳಿದಿದ್ದ ರಾಹುಲ್, ಕೊನೆಗೂ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಮಹೇಂದ್ರ ಸಿಂಗ್ ಧೋನಿ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಪ್ರಶ್ನೆಗೆ ಉತ್ತರವಾಗಿದ್ದಾರೆ.

ಕೆಳ ಕ್ರಮಾಂಕದಲ್ಲೂ ರಾಹುಲ್ ಬೀಸಿರುವ ಬ್ಯಾಟ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಇದನ್ನೇ ನಾಯಕ ವಿರಾಟ್ ಕೊಹ್ಲಿ ಉಲ್ಲೇಖಿಸಿದ್ದಾರೆ. ತಂಡಕ್ಕೆ ಮಹತ್ತರ ಸಮತೋಲನ ನೀಡುವ ಹಿನ್ನೆಲೆಯಲ್ಲಿ ರಾಹುಲ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಡಲಾಗುವುದು ಎಂದು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಇಲ್ಲಿ ಗಮನಾರ್ಹ ಅಂಶವೆಂದರೆ 2000ನೇ ದಶಕದಲ್ಲಿ ಭಾರತಕ್ಕೆ ಅತ್ಯುತ್ತಮ ವಿಕೆಟ್ ಕೀಪರ್ ಕೊರತೆ ಕಾಡಿದಾಗ ತಡೆಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ವಹಿಸಿದ್ದರು. ಅಂದು ದ್ರಾವಿಡ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸುವಲ್ಲಿ ಅಂದಿನ ನಾಯಕ ಸೌರವ್ ಗಂಗೂಲಿ ಮಹತ್ವದ ಪಾತ್ರ ವಹಿಸಿದ್ದರು.

2003ನೇ ವಿಶ್ವಕಪ್‌ನಲ್ಲೂ ಭಾರತ ರನ್ನರ್ ಅಪ್ ಪ್ರಶಸ್ತಿ ಗೆದ್ದ ಸಂದರ್ಭದಲ್ಲೂ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿದ್ದರು. ಇದೀಗ ಕರ್ನಾಟಕದವರೇ ಆಗಿರುವ ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಉಜ್ವಲ ಭವಿಷ್ಯ ರೂಪಿಸಲು ಸುವರ್ಣಾವಕಾಶವೊದಗಿ ಬಂದಿದೆ.

“ನನಗನಿಸುತ್ತದೆ ಕ್ರಮಾಂಕದ ವಿಷಯದಲ್ಲಿ ಸ್ಪಷ್ಟತೆಯ ಕೊರೆತಯು ಹಿನ್ನೆಡೆಯಾಗಿ ಪರಿಣಮಿಸಿತ್ತು. ಆದರೆ ಇದೀಗ ಯಾವುದು ಸರಿಯೆಂಬುದನ್ನು ಅರಿತುಕೊಂಡಿದ್ದೇವೆ. ಇನ್ನು ಸ್ಪಲ್ವ ಸಮಯದ ವರೆಗೂ ಇದೇ ತಂತ್ರವನ್ನು ಮುಂದುವರಿಸಲಿದ್ದು, ಯಶಸ್ವಿಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ. ಪದೇ ಪದೇ ಬದಲಾವಣೆ ಮಾಡಿ ಗೊಂದಲವನ್ನುಂಟು ಮಾಡಲು ಬಯಸುವುದಿಲ್ಲ” ಎಂದು ವಿರಾಟ್ ಕೊಹ್ಲಿ ವಿವರಿಸಿದರು.

“ನಾವು ಉತ್ತಮವಾಗಿ ಆಡುತ್ತಿದ್ದೇವೆ. ಆಡುವ ಬಳಗದಲ್ಲಿ ಬದಲವಾವಣೆಯನ್ನು ತರದೇ ಎರಡು ಪಂದ್ಯಗಳನ್ನು ಗೆದ್ದಿದ್ದೇವೆ. ಇದೀಗ ತಂಡದ ಸಮತೋಲನ್ನು ಬದಲಾವಣೆ ಮಾಡುವ ಅಗತ್ಯವಿಲ್ಲ. ಇದು ತಂಡದ ಪರ ಉತ್ತಮವಾಗಿ ಪರಿಣಮಿಸಿದೆ. ರಾಹುಲ್ ವಿಕೆಟ್ ಕೀಪಿಂಗ್ ಮಾಡುವುದರಿಂದ ಹೆಚ್ಚುವರಿ ಬ್ಯಾಟ್ಸ್‌ಮನ್‌ಗೆ ಅವಕಾಶ ಸಿಗುತ್ತದೆ. ಇದರಿಂದ ಬ್ಯಾಟಿಂಗ್ ವಿಭಾಗ ಬಲಾಢ್ಯಗೊಂಡಿದೆ. ಇದು ತಂಡದ ಸಮತೋಲನ ಕಾಪಾಡಿಕೊಳ್ಳಲು ನಿರ್ಣಾಯಕವೆನಿಸುತ್ತದೆ” ಎಂದರು.

2003 ವಿಶ್ವಕಪ್ ಗಮನಿಸಿದರೆ ದ್ರಾವಿಡ್ ಬಾಯ್ ವಿಕೆಟ್ ಕೀಪಿಂಗ್ ಹೊಣೆಯನ್ನು ವಹಿಸಿದ್ದರು. ಇದರಿಂದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಧನಾತ್ಮಕವಾಗಿ ಆಡಲು ಅವಕಾಶವೊದಗಿಸಿತ್ತು ಎಂದು ಕೊಹ್ಲಿ ಮೆಲುಕು ಹಾಕಿದರು.

ಮೊದಲ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದಿದ್ದ ರಾಹುಲ್, ದ್ವಿತೀಯ ಪಂದ್ಯದಲ್ಲಿ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. ನೋಡಿ, ಯಾವುದೇ ಪ್ರಕಾರದ ಆಟದಲ್ಲೂ ಪರಿಪೂರ್ಣ ಬ್ಯಾಟ್ಸ್‌ಮನ್ ಎಂದೆನಿಸಿರುವ ರಾಹುಲ್ ಯಾವ ಕ್ರಮಾಂಕದಲ್ಲೂ ಬೇಕಾದರೂ ಆಡಲೂ ಸಜ್ಜಾಗಿದ್ದಾರೆ. ಚೆಂಡನ್ನು ಪ್ರಥಮ ಎಸೆತದಲ್ಲೇ ದಂಡಿಸಲಾರರು. ಬದಲಾಗಿ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅತ್ಯುತ್ತಮ ಕ್ರಿಕೆಟಿಂಗ್ ಶಾಟ್ ಆಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ತಂಡದ ಪಾಲಿಗೆ ಕೆಎಲ್ ರಾಹುಲ್ ಮ್ಯಾಚ್ ವಿನ್ನರ್ ಆಗಿದ್ದಾರೆ ಎಂಬುದನ್ನು ಕೊಹ್ಲಿ ಹೇಳಿದರು. ಇವೆಲ್ಲವೂ ತಂಡದ ಪಾಲಿಗೆ ಉತ್ತಮ ಸಂಕೇತವಾಗಿದೆ ಎಂದರು.

ಮುಂಬರುವ ಟಿ20 ವಿಶ್ವಕಪ್‌ನಲ್ಲೂ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸುವರೇ ಎಂಬುದು ಸಾಕಷ್ಟು ಕುತೂಹಲವೆನಿಸಿದೆ. ಈ ಬಗ್ಗೆ ವಿರಾಟ್ ಕೊಹ್ಲಿ ಸ್ಪಷ್ಟನೆಯನ್ನು ನೀಡದಿದ್ದರೂ ತಂಡದ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಬ್ಯಾಟಿಂಗ್ ಕ್ರಮಾಂಕಕ್ಕೆ ಹೆಚ್ಚಿನ ಬಲ ತುಂಬುವ ನಿಟ್ಟಿನಲ್ಲಿ ಎಲ್ಲ ಆಯ್ಕೆಗಳು ಮುಕ್ತವಾಗಿದೆ ಎಂದು ಹೇಳಿದರು.

Leave a Comment