ರಾಹುಲ್ ಯಾತ್ರೆ ಕಾಂಗ್ರೆಸ್ ನಾಯಕರ ಪುಳಕ

ವೈ.ಎಸ್.ಎಲ್. ಸ್ವಾಮಿ

ಗುಲ್ಬರ್ಗಾ, ಫೆ. ೧೩- ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಜನಾಶೀರ್ವಾದ ಯಾತ್ರೆಯಿಂದ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ಕಾಂಗ್ರೆಸ್‌ ನಾಯಕರ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.
ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತವಾಗಿ ನಡೆದ ರಾಹುಲ್‌ಗಾಂಧಿ ಅವರ ಜನಾಶೀರ್ವಾದ ಯಾತ್ರೆಗೆ ಸಿಕ್ಕ ಜನಸ್ಪಂದನೆ, ಅಭೂತಪೂರ್ವ ಸ್ವಾಗತ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಕಾಂಗ್ರೆಸ್ ನಾಯಕರ ಕನಸನ್ನು ಸಾಕಾರಗೊಳ್ಳುವ ವಿಶ್ವಾಸವನ್ನು ಹೆಚ್ಚಿಸುವಲ್ಲಿ ನೆರವಾಗಿದೆ.
ಕಾಂಗ್ರೆಸ್‌ನ ಭದ್ರ ಕೋಟೆಯೆಂದೇ ಹೇಳಲ್ಪಡುವ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ ಬಳ್ಳಾರಿ, ರಾಯಚೂರು, ಯಾದಗಿರಿ, ಗುಲ್ಬರ್ಗಾ ಹಾಗೂ ಬೀದರ್‌ಗಳಲ್ಲಿ ರಾಹುಲ್ ನಡೆಸಿದ ರೋಡ್ ಶೋ, ಸಾರ್ವಜನಿಕ ಸಭೆಗಳ ಮೂಲಕ ಜನಾರ್ಶೀವಾದ ಯಾತ್ರೆಯನ್ನು ನಡೆಸಿ, ಜನರ ವಿಶ್ವಾಸಗಳಿಸಲು ಯತ್ನಿಸಿದರು.
ಕಳೆದ ನಾಲ್ಕು ದಿನಗಳಿಂದ ಆರು ಜಿಲ್ಲೆಗಳಲ್ಲಿ ನಡೆದ ರಾಹುಲ್ ಅವರ ಜನಾಶೀರ್ವಾದ ಯಾತ್ರೆ ಒಂದು ರೀತಿ ರಾಜ್ಯ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನವನ್ನು ಬಿಂಬಿಸುವಲ್ಲಿ ಯಶಸ್ವಿಯಾಯಿತು.
ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್‌ನ ಸಂಘಟನಾ ಶಕ್ತಿಯನ್ನು ಜನಾಶೀರ್ವಾದ ಯಾತ್ರೆ ಅನಾವರಣಗೊಳಿಸಿತು.
ರಾಹುಲ್ ಹೋದೆಡೆಯಲೆಲ್ಲಾ ಕಿಕ್ಕಿರಿದು ಸೇರಿದ್ದ ಜನಸ್ತೋಮ ರಾಹುಲ್,ರಾಹುಲ್ಎಂಬ ಘೋಷಣೆಗಳು ರಾಜ್ಯ ಕಾಂಗ್ರೆಸ್ ನಾಯಕರ ಮೊಗದಲ್ಲಿ ಸಂತಸ ಮೂಡಿಸಿದ್ದಂತೂ ನಿಜ.
ಸಾಮಾನ್ಯವಾಗಿ ಯಾವುದೇ ಸರ್ಕಾರ ಐದು ವರ್ಷಗಳ ಆಡಳಿತ ನಡೆಸಿದ ನಂತರ ಆಡಳಿಚ ವಿರೋಧಿ ಅಲೆ ಇರುವುದು ಸಹಜ. ಅದನ್ನೆಲ್ಲಾ ಮುಚ್ಚಿ ಹಾಕುವಂತೆ ರಾಹುಲ್‌ಗಾಂಧಿ ಅವರ ಜನಾಶೀರ್ವಾದ ಯಾತ್ರೆ ನಡೆಯಿತು.
ಈ ಯಾತ್ರೆಯ ಉದ್ದಕ್ಕೂ ಅತ್ಯಂತ ಉಲ್ಲಾಸಿತರಾಗಿ, ಪುಟಿದೇಟುವ ಉತ್ಸಾಹದಿಂದ ಪಾಲ್ಗೊಂಡಿದ್ದ ರಾಹುಲ್, ಪ್ರತಿದಿನ ಕನಿಷ್ಠ 100 ಕಿ.ಮೀ. ರಸ್ತೆಯಲ್ಲಿ ಸಾಗಿ ಜನ ಸೇರಿದ ಕಡೆಯಲ್ಲೆಲ್ಲಾ ಬಸ್‌ನಿಂದ ಕೆಳಗಿಳಿದು ಜನರಲ್ಲಿ ಒಂದಾಗಿ ಬೆರೆತ ರೀತಿ, ನೀತಿ, ಅವರ ನಡೆ ನುಡಿಗಳು ಜನರ ಮನಗೆಲ್ಲುವಲ್ಲಿ ಯಶಸ್ವಿಯಾದವು.
ನಿತ್ಯ ಕನಿಷ್ಠ 3 ರಿಂದ4 ಸಾರ್ವಜನಿಕ ಸಭೆ, ಜತೆಗೆ ಅಷ್ಟೇ ಸಂಖ್ಯೆಯ ಚುಟುಕು ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಜತೆಗೆ ಯಾತ್ರೆ ಸಾಗುವ ರಸ್ತೆಯುದ್ದಕ್ಕೂ ಜನಾಶೀರ್ವಾದ ಯಾತ್ರೆಯ ವಿಶೇಷ ಬಸ್‌ನಲ್ಲಿ ನಿಂತು ಕೈಬೀಸಿ ಸಾಗುತ್ತಿದ್ದ ರಾಹುಲ್, ಚೈತನ್ಯದ ಚಿಲುಮೆಯಂತೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಈ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಭದ್ರತೆಯನ್ನು ಲೆಕ್ಕಿಸದೆ ಅಲ್ಲಲ್ಲಿ ಬಸ್‌ನಿಂದ ಇಳಿದು ಜನರ ಬಳಿಗೆ ತೆರಳಿ ಅವರ ಕೈ ಕುಲುಕಿ ಅಪ್ಪಿಕೊಂಡು ಅವರ ಕಷ್ಟಗಳಿಗೆ ರಾಹುಲ್ ಕಿವಿಯಾದದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.
ಯಾವುದೇ ಹಮ್ಮು ಬಿಮ್ಮು ತೋರದೆ ನಾಯಕನೊಬ್ಬ ತಮ್ಮ ಬಳಿಗೆ ಬಂದು ತಮ್ಮ ಜತೆ ಮಾತನಾಡಿದ್ದು, ಜನರ ಹರ್ಷವನ್ನು ಹೆಚ್ಚಿಸಿತು.
ಇದರ ಜತೆಗೆ ಕಲ್ಮಲದಲ್ಲಿ ಸ್ಥಳೀಯ ಜನಪ್ರಿಯ ಆಹಾರವಾದ ಮಿರ್ಚಿ, ಬಜ್ಜಿ, ಮಂಡಕ್ಕಿಯನ್ನು ಚಪ್ಪರಿಸಿ ತಿಂದ ರಾಹುಲ್ ಎಲ್ಲರಿಗೂ ಇಷ್ಟವಾದದ್ದು ಖರೆ.
ರಾಹುಲ್ ಗಾಂಧಿ ಅವರು ಈ ಜನಾಶೀರ್ವಾದ ಯಾತ್ರೆಯ ಉದ್ದಕ್ಕೂ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ನಡೆಸಿದ ವಾಗ್ದಾಳಿ ಮೋದಿ ಅವರ ವೈಫಲ್ಯಗಳನ್ನು ಎಳೆಎಳೆಯಾಗಿ ಜನರ ಮುಂದಿಡುವಲ್ಲಿ ಸಫಲರಾದರು.
ಸಾರ್ವಜನಿಕ ಸಭೆಗಳಲ್ಲಿ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದಾಗ ಅವರಿಗೆ ಕರತಾಂಡನದ ಮೂಲಕ ದೊರೆತ ಜನ ಬೆಂಬಲ ಅವರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತ್ತು.
ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೆ ನಿರಂತರ 12 ಗಂಟೆಗಳ ಕಾಲ ರಾಹುಲ್ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು, ಎಲ್ಲರ ಗಮನ ಸೆಳೆಯಿತು.
ರಾಹುಲ್‌ಗಾಂಧಿ ಅವರ ಈ ಜನಾಶೀರ್ವಾದ ಯಾತ್ರೆಯ ಫಲಶೃತಿಗಾಗಿ ಚುನಾವಣೆ ಮುಗಿಯುವವರೆಗೂ ಕಾಯಬೇಕು.
ಈ ಯಾತ್ರೆ ಎಷ್ಟರ ಮಟ್ಟಿಗೆ ಯಶಸ್ವಿಯಾಯಿತು, ಅದರಿಂದ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯುಲಿದೆಯೇ ಎಂಬ ಪ್ರಶ್ನೆಗಳಿಗೆ ಚುನಾವಣೆಗಳೇ ಉತ್ತರ ನೀಡಲಿವೆ.
ಏನೇ ಇರಲಿ ಕಾಂಗ್ರೆಸ್ ಭದ್ರ ಕೋಟೆಯಲ್ಲಿ ರಾಹುಲ್‌ಗಾಂಧಿ ಅವರ ಜನಾಶೀರ್ವಾದ ಯಾತ್ರೆ ಕಾಂಗ್ರೆಸ್ ಪಕ್ಷದ ಪರವಾದ ಒಂದು ವಾತಾವರಣ ಮೂಡಿಸಿರುವುದು ಸ್ಪಷ್ಟ.

Leave a Comment