ರಾಹುಲ್ ಮಾಂಸ ಸೇವನೆ ಚುನಾವಣೆಯಲ್ಲಿ  ಪರಿಣಾಮ:ಯತ್ನಾಳ

ವಿಜಯಪುರ : ಧರ್ಮಸ್ಥಳದಲ್ಲಿ ಮಾಂಸಾಹಾರ ಸೇವನೆ ಮಾಡಿದ ಪರಿಣಾಮವಾಗಿಯೇ ಸಿದ್ಧರಾಮಯ್ಯ ಅಧಿಕಾರದಿಂದ ಕೆಳಗಿಳಿದರು, ಈಗ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಚಿಕನ್ ಸೂಪ್ ಸೇವಿಸಿದ್ದಾರೆ. ಈಗ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಹಿಂದೂಗಳನ್ನು ಓಲೈಕೆಗಾಗಿ ದೇವಾಲಯಕ್ಕೆ ಭೇಟಿ ನೀಡಿದರೆ ಸಾಲದು, ಸಂಪ್ರದಾಯಗಳನ್ನು ಪಾಲಿಸಬೇಕಲ್ಲವೇ? ಕೇವಲ ದೇವಾಲಯಕ್ಕೆ ಹೋಗುವ ನಾಟಕವಾಡುವುದು ಸರಿಯಲ್ಲ ಎಂದರು.

ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದಾಗ ಚಿಂತಕರು ಎಲ್ಲಿದ್ದರು?

ಗೌರಿ ಲಂಕೇಶ ಹತ್ಯೆಯ ವಿರುದ್ಧ ಅನೇಕ ಚಿಂತಕರು ಧ್ವನಿ ಎತ್ತಿದ್ದಾರೆ. ಗೌರಿ-ಡೇ ಆಚರಣೆ ಮಾಡುತ್ತಿದ್ದಾರೆ. ಆದರೆ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದ ಸಂದರ್ಭದಲ್ಲಿ ಯಾರೊಬ್ಬ ಚಿಂತಕರು ಧ್ವನಿ ಎತ್ತಿಲ್ಲ.

ಇನ್ನೂ ರಾಜೀವಗಾಂಧಿ ಅವರನ್ನು ಹತ್ಯೆ ಮಾಡಿದವರನ್ನು ದೇಶದ್ರೋಹಿಗಳೆಂದು ಕರೆಯಲಾಗಿದೆ. ಪ್ರಧಾನಿ ಮೋದಿ ಅವರ ಹತ್ಯೆಗೆ ಸಂಚು ಮಾಡಿದ ಆರೋಪಿಗಳನ್ನು ಚಿಂತಕರು ಎಂದು ಕರೆಯಲಾಗುತ್ತಿದೆ. ಮೋದಿ ಅವರು ಇಡೀ ದೇಶದ ಪ್ರಧಾನಿ, ಅವರ ಹತ್ಯೆಯ ಬಗ್ಗೆ ಪ್ರತಿಪಕ್ಷಗಳು ಮೌನ ವಹಿಸಿರುವುದು ಖಂಡನೀಯ ಎಂದರು.

ನೆಹರೂ ಮಾಡಿದ ಒಂದು ತಪ್ಪಿನಿಂದಾಗಿ ಚೀನಾ ವಿರುದ್ಧ ನಾವು ಸೋಲಬೇಕಾಯಿತು. ಸೈನಿಕರಿಗೆ ಬೇಕಾದ ಪೂರಕ ಶಸ್ತ್ರಾಸ್ತ್ರಗಳು, ಅಗತ್ಯ ಸಲಕರಣಗಳನ್ನು ಒದಗಿಸುವಲ್ಲಿ ಆಗಿನ ಸರ್ಕಾರ ವಿಫಲವಾಯಿತು. ಈಗ ಮೋದಿ ಅವರು ಸೈನಿಕರನ್ನು ಬಲಿಷ್ಠಗೊಳಿಸುತ್ತಿದ್ದಾರೆ, ಅವರಿಗೆ ಪೂರಕವಾದ ಎಲ್ಲ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸುತ್ತಿದ್ದಾರೆ, ಇದನ್ನು ಪ್ರತಿಯೊಬ್ಬರು ಹೆಮ್ಮೆ ಪಡಬೇಕು

ರಾಡಿ ತೊಳೆಯುತ್ತಿದ್ದಾರೆ….

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಯತ್ನಾಳರು, ಈ ಹಿಂದೆ ಪೆಟ್ರೋಲ್, ಡಿಸೈಲ್ ವಿಷಯವಾಗಿಯೇ ಯುಪಿಎ ಸರ್ಕಾರ ಲಕ್ಷಾಂತರ ಕೋಟಿ ರೂ. ಗಲ್ಫ್ ರಾಷ್ಟ್ರಗಳಲ್ಲಿ ಸಾಲ ಉಳಿಸಿಕೊಂಡಿತ್ತು, ಈ ರಾಡಿಯನ್ನು ಮೋದಿ ಅವರು ತೊಳೆಯುತ್ತಿದ್ದಾರೆ, ಈಗ ಸ್ವಲ್ಪ ತೊಂದರೆಯಾಗಿರಬಹುದು, ಆದರೆ ದೇಶದ ಹಿತಕ್ಕಾಗಿ ಈ ಒಂದು ತೊಂದರೆ ಸಹಿಸಿಕೊಳ್ಳಬೇಕು.

ಗಲ್ಫ್ ರಾಷ್ಟ್ರಗಳಿಂದ ಪಡೆದುಕೊಂಡಿದ್ದ ಎಲ್ಲ ಸಾಲವನ್ನೂ ಮೋದಿ ಅವರು ಚುಕ್ತಾ ಮಾಡಿದ್ದಾರೆ, ಯುಪಿಎ ಮಾಡಿದ್ದ ರಾಡಿಯನ್ನೂ ಸಂಪೂರ್ಣವಾಗಿ ತೊಳೆದಿದ್ದಾರೆ, ಪರಿಣಾಮವಾಗಿಯೇ ನೇರ ಪೈಪ್‍ಲೈನ್ ಮೂಲಕ ಪೆಟ್ರೋಲ್ ಸರಬರಾಜು ಆಗುತ್ತಿದೆ. ಇನ್ನೂ ಜಿಡಿಪಿಯಲ್ಲಿ ಚೀನಾ ದೇಶವನ್ನು ನಮ್ಮ ದೇಶ ಮೀರಿಸಿದೆ ಇದು ಅಚ್ಛೆ ದಿನ ಅಲ್ಲವೇ? ಎಂದು ಪ್ರಶ್ನಿಸಿದರು…

Leave a Comment