ರಾಹುಲ್ ಬೀಳಗಿ ಕೊಲೆ :10 ಜನರ ಬಂಧನ

ಕಲಬುರಗಿ,ಸೆ.14-ಆಳಂದ ತಾಲ್ಲೂಕ ಪಂಚಾಯತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ ಅವರ ಪುತ್ರ, ಬಿಜೆಪಿ ಯುವ ಮುಖಂಡ ರಾಹುಲ್ ಬೀಳಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಬೀಳಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಸನೂರ ಗ್ರಾಮದ  ನಾಗರಾಜ ಅಪ್ಪಾರಾವ ಪಾಟೀಲ, ಸಚೀನ್ ಅಣ್ಣಾರಾವ ಪಾಟೀಲ, ಅಸ್ಲಾಂ ಭಾಷಾಸಾಬ ಪಾಗದ, ಹಸನ್ ಅಲಿಯಾಸ್ ಛೋಟಾ ಹಸನ ಪೈಜುಸಾಬ ಶೇಖ್, ದಾವೂದ ದಸ್ತಗಿರ ಪಾಗದ, ಸಚೀನ್ ಶಶಿಕಾಂತ ಪೊಲೀಸ್ ಪಾಟೀಲ, ಶಂಕರರಾವ ಸಿದ್ದಣ್ಣಗೌಡ ಪಾಟೀಲ, ಅಶೋಕ ಶಂಕರರಾವ ಪಾಟೀಲ, ಗಿರೀಶ ಗುಂಡೇರಾವ ಗೊಬ್ಬೂರ ಮತ್ತು 17 ವರ್ಷದ ಅಪ್ರಾಪ್ತ ಬಾಲಕ ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಿ ಒಂದು ಬುಲೇರೊ ವಾಹನ, ಒಂದು ಬೈಕ್, 5 ಮಾರಕಾಸ್ತ್ರ, 1 ವ್ಹೀಲ್ ಪಾನ್ ಹಾಗೂ 5 ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಸೆ.2 ರಂದು ರಾಹುಲ್ ಬೀಳಗಿ ಬೈಕ್ ಮೇಲೆ ಭೂಸನೂರ ಕಡೆಗೆ ಹೋಗುತ್ತಿದ್ದಾಗ ಆರೋಪಿಗಳು ಬೈಕ್ ಗೆ ಬುಲೇರೊ ವಾಹನದಿಂದ ಡಿಕ್ಕಿ ಹೊಡಿಸಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಯಾದ ರಾಹುಲ್ ಬೀಳಗಿ ತಂದೆ ಲಕ್ಷ್ಮಣ ಬೀಳಗಿ ಮತ್ತು ಬಾಬುಗೌಡ ಪಾಟೀಲ ಕುಟುಂಬಗಳ ನಡುವಿನ ರಾಜಕೀಯ ಮತ್ತು ಹಳೆ ವೈಷಮ್ಯ ಈ ಕೊಲೆಗೆ ಕಾರಣ ಎಂದು ತಿಳಿಸಿದರು.

ಕೊಲೆ ಆರೋಪಿಗಳ ಬಂಧನಕ್ಕೆ ಎಸ್ಪಿ, ಹೆಚ್ಚುವರಿ ಎಸ್ಪಿ, ಗ್ರಾಮೀಣ ಡಿಎಸ್ಪಿ ಎಸ್.ಎಸ್.ಹುಲ್ಲೂರ್, ಆಳಂದ ಸಿಪಿಐ ಹೆಚ್.ಬಿ. ಸಣ್ಣಮನಿ, ಅಫಜಲಪುರ ಸಿಪಿಐ ರವೀಂದ್ರ ನಾಯಕೋಡಿ, ಪಿಎಸ್ಐಗಳಾದ ಸುರೇಶಬಾಬು, ಸಂತೋಷ ರಾಠೋಡ್ ಹಾಗೂ ಸಿಬ್ಬಂದಿಗಳ ಪ್ರತ್ಯೇಕ ತಂಡ ರಚಿಸಲಾಗಿತ್ತು. ಈ ತಂಡಗಳು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ ಎಂದು ವಿವರಿಸಿದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 14 ಜನರ ವಿರುದ್ಧ ದೂರು ದಾಖಲಾಗಿದ್ದು, 10 ಜನರನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ತಿಳಿಸಿದರು.

Leave a Comment