ರಾಹುಲ್-ಧವನ್ ಶತಕದ ಜೊತೆಯಾಟ

ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್‌ನ ಮೊದಲ ಅವಧಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಲಂಕಾ ಬೌಲರ್‌ಗಳ ಬೆವರಿಳಿಸಿದ್ದಾರೆ. ಪಲ್ಲೆಕಲೆಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಭಾರತ, ಇತ್ತೀಚಿನ ವರದಿ ಪ್ರಕಾರ,

ಭೋಜನಾ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ ೧೩೪ ರನ್‌ಗಳಿಸಿದ್ದು, ಸವಾಲಿನ ಮೊತ್ತ ಕಲೆಹಾಕುವತ್ತ ದಿಟ್ಟ ಆರಂಭವನ್ನಿತ್ತಿದೆ. ಟೂನಿಯ ಮೊದಲೆರಡು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದ್ದ ಧವನ್ ಹಾಗೂ ರಾಹುಲ್ ಬ್ಯಾಟಿಂಗ್ ವೈಭವ ಪಲ್ಲೆಕೆಲೆಯಲ್ಲಿಯೂ ಮುಂದುವರಿದಿದೆ. ಧವನ್  ಹಾಗೂ ರಾಹುಲ್ ಜೋಡಿಯ ಅಬ್ಬರದ ಅರ್ಧಶತಕಗಳ ಎದುರು, ವಿಕೆಟ್ ಶ್ರೀಂಕಾ ಬೌಲರ್‌ಗಳ ಎಲ್ಲಾ ಪ್ರಯತ್ನವೂ ವ್ಯರ್ಥವಯ್ತು. ಧವನ್ ೬೪ ಹಾಗೂ ರಾಹುಲ್ ೬೭ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ರಾಹುಲ್, ಸತತ ೭ನೇಬಾರಿಗೆ ಅರ್ಧ ಶತಕದ ಗಡಿ ದಾಟುವ ಮೂಲಕ ಈ ಸಾಧನೆಗೈದ ೪ನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾದರು. ೩೦ ಓವರ್‌ಗಳ ದಾಳಿಯಲ್ಲಿ ಶ್ರೀಲಂಕಾ ಐವರು ಬೌಲರ್‌ಗಳನ್ನು ಪರೀಕ್ಷಿಸಿದರೂ ಫಲ ಕಾಣಲಿಲ್ಲ

ಸರಾಸರಿ ೪.೯೬ರಲ್ಲಿ ರನ್ ಕಲೆಹಾಕುತ್ತಾ ಧವನ್-ರಾಹುಲ್ ಜೋಡಿ ಭಾರೀ ಮೊತ್ತದ ಮುನ್ಸೂಚನೆ ನೀಡಿದ್ದಾರೆ.

ಬದಲಾವಣೆ:

ಅಂತಿಮ ಟೆಸ್ಟ್‌ನಲ್ಲಿ ಅನಿವಾರ್ಯವಾಗಿ ಭಾರತ ಒಂದು ಬದಲಾವಣೆ ಮಾಡಿಕೊಂಡಿದೆ. ದ್ವಿತೀಯ ಟೆಸ್ಟ್‌ನ ವೇಳೆ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದ ರವೀಂದ್ರ ಜಡೇಜಾಗೆ ಮೂರನೇ ಟೆಸ್ಟ್‌ಗೆ ನಿಷೇಧ ಹೇರಲಾಗಿದೆ. ಜಡ್ಡು ಬದಲಿಗೆ ಚೈನಾಮನ್ ಬೌಲರ್ ಕುಲ್‌ದೀಪ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ೨೪ ತಿಂಗಳ ಅವಧಿಯಲ್ಲಿ ಆರು ದೋಷ ಅಂಕ ಪಡೆದ ಕಾರಣಕ್ಕಾಗಿ ಐಸಿಸಿ, ಜಡೇಜಾಗೆ ಒಂದು ಪಂದ್ಯ ನಿಷೇಧದ ಶಿಕ್ಷೆ ವಿಧಿಸಿತ್ತು.

ಮತ್ತೊಂದೆಡೆ ಪಂದ್ಯ ಗೆಲ್ಲಲೇಬೇಕಾದ ತೀವ್ರ ಒತ್ತಡದಲ್ಲಿರುವ ಲಂಕಾ ೩ನೇ ಪಂದ್ಯಕ್ಕಾಗಿ ೩ ಬದಲಾವಣೆ ಮಾಡಿಕೊಂಡಿದೆ. ಗಾಯಾಳು ರಂಗನಾ ಹೆರಾತ್ ಬದಲಿಗೆ ಚೈನಾಮನ್ ಸ್ಪಿನ್ನರ್ ಲಕ್ಷಣ್ ಸಂದಕನ್‌ಗೆ ಮಣೆ ಹಾಕಿದೆ. ಅಲ್ಲದೆ ವೇಗಿಗಳಾದ ಲಹಿರು ಕುಮಾರ, ವಿಶ್ವ ಫೆರ್ನಂಡೋ ತಂಡಕ್ಕೆ ಮರಳಿದ್ದು, ಧನಂಜಯ ಡಿ ಸಿಲ್ವಾ ಹಾಗೂ ಗಾಯಾಳು ನುವಾನ್ ಪ್ರದೀಪ್ ತಂಡದಿಂದ ಹೊರಗುಳಿದಿದ್ದಾರೆ.

ಅಪರೂಪದ ದಾಖಲೆ

ಪಲ್ಲೆಕೆಲೆಯ ೩ನೇ ಟೆಸ್ಟ್ ಅಪರೂಪದ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ. ಟೀಂ ಇಂಡಿಯಾದಲ್ಲಿ ಕುಲದೀಪ್ ಯಾದವ್ ಹಾಗೂ ಲಂಕಾದಲ್ಲಿ ಲಕ್ಷಣ್ ಸಂಡಕನ್ ಸ್ಥಾನ ಪಡೆಯುವ ಮೂಲಕ ೨೦೦೪ರ ಬಳಿಕ ಉಭಯ ತಂಡಗಳಲ್ಲೂ ಚೈನಾಮನ್ ಬೌಲರ್‌ಗಳು ಕಾಣಿಸಿಕೊಂಡ ದಾಖಲೆ ನಿರ್ಮಾಣವಾಗಿದೆ. ೨೦೦೪ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಡೇವ್ ಮೊಹಮ್ಮದ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪಾಲ್ ಆಡಮ್ಸ್ ಚೈನಾಮನ್ ಮೋಡಿ ಮಾಡಿದ್ದರು.

ಇತಿಹಾಸ ರಚಿಸಲು ಕೊಹ್ಲಿ ಕಾತರ..!

೩ ಟೆಸ್ಟ್ ಗಳ ಸರಣಿಯಲ್ಲಿ ಈಗಾಗಲೇ ೨ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ. ೩ನೇ ಟೆಸ್ಟ್ ಕೂಡ ಕೊಹ್ಲಿ ಪಡೆ ಗೆದ್ದರೆ ಅದು ಐತಿಹಾಸಿಕ ಸಾಧನೆಯಾಗಲಿದೆ.  ೧೯೬೪ರ ಬಳಿಕ ವಿದೇಶದಲ್ಲಿ ಆಡಿದ ಮೂರು-ಟೆಸ್ಟ್ ಸರಣಿಯಲ್ಲಿ ಅತೀಥೇಯ ತಂಡದ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆಗೈದ ಮೊದಲ ತಂಡವೆಂಬ ದಾಖಲೆ ಭಾರತದ್ದಾಗಲಿದೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನ್ನು ೩೦೪ ರನ್‌ಗಳಿಂದ ಗೆದ್ದಿದ್ದ ಭಾರತ ಬಳಿಕ ಕೊಲಂಬೊದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು ೫೩ ರನ್‌ಗಳಿಂದ ಗೆದ್ದು ಬೀಗಿತ್ತು. ಹೀಗಾಗಿ ತವರಿನ ಅಭಿಮಾನಿಗಳೆದುರು ಕೊನೆ ಪಂದ್ಯ ಗೆದ್ದು ಅಥವಾ ಕನಿಷ್ಟ ಡ್ರಾಮಾಡಿಕೊಳ್ಳಲು ಶ್ರೀಲಂಕಾ ಹರಸಾಹಸ ಪಡೆಬೇಕಾಗಿದೆ.

Leave a Comment