ರಾಹುಲ್ ಗಾಂಧಿ ಪ್ರಧಾನಿ ಮಾಡಿ : ಖರ್ಗೆ ಕರೆ

ಬೀದರ್,ಆ.13-ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆ ಮತ್ತು ದೇಶದ ಏಕತೆಗಾಗಿ ಕಾಂಗ್ರೆಸ್ ನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿಂದು ನಡೆದ ಜನಧ್ವನಿ ಮತ್ತು ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಲು ಅನುವು ಮಾಡಿಕೊಡುವುದರ ಮೂಲಕ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿಯನ್ನಾಗಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತದ ಹಗಲು ಗನಸು ಕಾಣುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಅಸಾಧ್ಯ ಎಂದ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಮೋದಿ ಮತ್ತು ಷಾ ಅವರು ಬರೀ ಮಾತುಗಳನ್ನು ಆಡುವುದರ ಮೂಲಕ ಜನರನ್ನು ಮರಳು ಮಾಡುತ್ತಿದ್ದಾರೆ. ದೇಶದ ಜನತೆ ಅವರ ಮರಳು ಮಾತುಗಳಿಗೆ ಮಾರು ಹೋಗಬಾರದು ಎಂದರು.

ದೇಶದಲ್ಲಿ 70 ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಕೇಳುತ್ತಾರೆ. ಎಪ್ಪತ್ತು ವರ್ಷದಲ್ಲಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳಿಂದಲೇ ಅವರು ಪ್ರಧಾನಿಯಾಗಿದ್ದನ್ನು ಮೋದಿ ಮರೆತ್ತಿದ್ದಾರೆ ಎಂದರು.

ಹೈದ್ರಾಬಾದ ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್ ಬಹುದೊಡ್ಡ ಕೊಡುಗೆ ನೀಡಿದೆ. ಸಂವಿಧಾನದ 371(ಜೆ) ಕಲಂ ಜಾರಿಗೆ ತರುವುದರ ಮೂಲಕ ಹೈ-ಕ ಅಭಿವೃದ್ಧಿಗೆ ನಾಂದಿ ಹಾಡಿದೆ. ಇದರಿಂದಾಗಿ ಪಕ್ಷ ಹೈದ್ರಾಬಾದ ಕರ್ನಾಟಕದಲ್ಲಿ ಐದು ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

Leave a Comment