ರಾಹುಲ್ ಗಾಂಧಿಗೆ ಸುಪ್ರೀಂ ನೋಟೀಸ್

ನವದೆಹಲಿ, ಏ. ೧೫- ರಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ‘ಚೌಕಿದಾರ್ ಚೋರ್ ಹೈ’ ಎಂದು ಆರೋಪ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ಇಂದು ಶೋಕಾಸ್ ನೋಟೀಸ್ ಜಾರಿ ಮಾಡಿದೆ.

ಈ ಹಗರಣದ ಸಂಬಂಧ ಅರ್ಜಿದಾರರು ಸಲ್ಲಿಸಿದ್ದ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಲ್ಲಿ ನಡೆದ ಚುನಾವಣಾ ಱ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಕುರಿತು ಚೌಕಿದಾರ್ ಚೋರ್ ಹೈ ಎಂದು ಟೀಕಿಸಿದ್ದರು.

ಈ ಸಂಬಂಧ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯ ನಿಂದನೆ ಆರೋಪವನ್ನು ಹೊರಿಸಿ ಸುಪ್ರೀಂ ಕೋರ್ಟ್‌ಗೆ ಮೊರೆಹೋಗಿತ್ತು. ರಾಹುಲ್ ಗಾಂಧಿ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ರಫೇಲ್ ಪ್ರಕರಣ ಸಂಬಂಧ ತಾನು ನೀಡಿದ್ದ ಆದೇಶವನ್ನು ಕಾಂಗ್ರೆಸ್ ಅಧ್ಯಕ್ಷರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದೆ.

ಈ ಕುರಿತ ಮುಂದಿನ ವಿಚಾರಣೆಯನ್ನು ಈ ತಿಂಗಳ 23ಕ್ಕೆ ಮುಂದೂಡಿರುವ ಸುಪ್ರೀಂ ಕೋರ್ಟ್ ಅಷ್ಟರೊಳಗೆ ತಮ್ಮ ಉತ್ತರವನ್ನು ನೀಡಬೇಕೆಂದು ರಾಹುಲ್ ಗಾಂಧಿ ಅವರಿಗೆ ಸೂಚಿಸಿದೆ.

ರಾಜಕಾರಣಿಗಳ ವಿರುದ್ಧ ಕ್ರಮಕ್ಕೆ ಸೂಚನೆ

ಕಾನೂನುಗಳನ್ನು ಉಲ್ಲಂಘಿಸುವ ರಾಜಕಾರಣಿಗಳ ವಿರುದ್ಧ ಚುನಾವಣಾ ಆಯೋಗ ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಳ್ಳುವಂತೆ, ಸುಪ್ರೀಂ ಕೋರ್ಟ್ ಮತ್ತೊಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸೂಚಿಸಿದೆ.

ಕಾನೂನು ಉಲ್ಲಂಘಿಸುವ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.

2019ರ ಲೋಕಸಭಾ ಚುನಾವಣೆಯ ಎರಡನೇ ಹಂತಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿರುವ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಅಜಂಖಾನ್ ಹಾಗೂ ಬಿಜೆಪಿಯ ಜಯಪ್ರದಾ ಅವರ ನಡುವೆ ತೀವ್ರ ವಾಗ್ದಾಳಿ ಮುಂದುವರೆದಿದೆ.

ನಿನ್ನೆ ನಡೆದ ಚುನಾವಣಾ ಱ್ಯಾಲಿಯಲ್ಲಿ ಮಾತನಾಡಿದ ಅಜಂಖಾನ್ ಅವರು, ಜಯಪ್ರದಾ ಅವರ ವಿರುದ್ಧ ಟೀಕಾಪ್ರಹಾರ ಮಾಡಿದ್ದರು. ಅವರ ವಿರುದ್ಧ ಬಿಜೆಪಿ ಎಫ್.ಐ.ಆರ್. ದಾಖಲಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಯಪ್ರದಾ, ಖಾನ್ ಅವರು ತಮ್ಮ ಮಿತಿಮೀರಿ ಮಾತನಾಡುತ್ತಿದ್ದು, ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕೆಂದು ಜನತೆಗೆ ಮನವಿ ಮಾಡಿದ್ದಾರೆ.

Leave a Comment