ರಾಷ್ಟ್ರೀಯ ಹೆದ್ದಾರಿ 167 : ಕಾಮಗಾರಿ ಸ್ಥಗಿತಕ್ಕೆ ಜೆಸ್ಕಾಂ ನೋಟೀಸ್

ರಾಯಚೂರು.ಅ.10- ತಾಲೂಕಿನ ರಾಯಚೂರು-ಮಂತ್ರಾಲಯ 167 ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಗಿಲ್ಲೇಸೂಗೂರು ಗ್ರಾಮದ ದುಗನೂರು ಗ್ರಾಮಕ್ಕೆ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಗಿಲ್ಲೇಸೂಗೂರು ಕಾರ್ಯ ಮತ್ತು ಪಾಲನಾ ಶಾಖಾಧಿಕಾರಿ, ಲೋಕೋಪಯೋಗಿ ಕಾರ್ಯ ನಿರ್ವಾಹಕ ಅಭಿಯಂತರರು ಮತ್ತು ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.
ಈ ರಸ್ತೆ ನಿರ್ಮಾಣ ಮಾರ್ಗದಲ್ಲಿ ಹೆಚ್‌ಟಿ 11 ಕೆವಿ ಹಾಗೂ ಇನ್ನಿತರ ವಿದ್ಯುತ್ ತಂತಿ ಹಾದು ಹೋಗುತ್ತವೆ. ವಿದ್ಯುತ್ ಪರಿವರ್ತಕ ಹಾಗೂ ಕಂಬಗಳನ್ನು ನಿಯಮ ಪ್ರಕಾರ ಸ್ಥಳಾಂತರಿಸುವವರೆಗೂ ಮುಖ್ಯ ರಸ್ತೆ ಕಾಮಗಾರಿ ನಿಲ್ಲಿಸತಕ್ಕದ್ದು. ಒಂದು ವೇಳೆ ಈ ನೋಟೀಸ್ ತಲುಪಿದ ನಂತರವೂ ಕಾಮಗಾರಿಗೆ ಸ್ಥಗಿತಗೊಳಿಸದಿದ್ದರೇ, ಇದರಿಂದ ಉಂಟಾಗುವ ಅಪಘಾತಕ್ಕೆ ಲೋಕೋಪಯೋಗಿ ಇಲಾಖೆ ನೇರ ಹೊಣೆಯಾಗಬೇಕಾಗುತ್ತದೆ.
ಜೆಸ್ಕಾಂ ವಿದ್ಯುತ್ ವಾಹಕಗಳಿಂದ 11 ಕೆವಿ, 440, 220 ವೊಲ್ಟ್ ವಿದ್ಯುತ್ ಸಂಚಾರದಿಂದ ಮಾನವ ಪ್ರಾಣ ಮತ್ತಿತರ ದುರ್ಘಟನೆಗಳು ನಡೆದರೇ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆಂದು ಶಾಖಾಧಿಕಾರಿ ಹುಲಿರಾಜ ಅವರು ನೋಟೀಸ್ ಜಾರಿಗೊಳಿಸಿದ್ದಾರೆ. ಉದ್ದೇಶಿತ ಕಾಮಗಾರಿ ಕೈಗೊಳ್ಳುತ್ತಿರುವ ಪ್ರದೇಶದಲ್ಲಿ ಕಂಬಗಳ ಮಧ್ಯೆ ಬಲ್ಲೀಸ್ ಮೂಲಕ ಅತ್ಯಂತ ಅಪಾಯಕಾರಿ ವಿದ್ಯುತ್ ತಂತಿಗಳಿಗೆ ಆಧಾರ ನೀಡಲಾಗಿದೆ.
ಲೋಕೋಪಯೋಗಿ ಇಲಾಖೆಯ ಈ ಕ್ರಮ ಅತ್ಯಂತ ಅಪಾಯಕಾರಿಯಾಗಿದೆ. ಈ ರೀತಿ ಕಾಮಗಾರಿ ಮುಂದುವರೆಸುವುದು ಭಾರೀ ಅನಾಹುತಕ್ಕೆ ಆಹ್ವಾನ ನೀ‌ಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ನೋಟೀಸ್‌ನಲ್ಲಿ ಸೂಚಿಸಲಾಗಿದೆ. ತಂತಿ ಹಾದು ಹೋಗುವ ಮಾರ್ಗದಲ್ಲಿ ಎತ್ತರ ಮಟ್ಟಕ್ಕೆ ಮರಂ ಹಾಕಿರುವುದು ರಸ್ತೆಯ ತಂತಿಗಳು ವಾಹನಗಳಿಗೆ ತಾಕುವ ಸಾಧ್ಯತೆಗಳಿವೆ ಎನ್ನುವ ಎಚ್ಚರಿಕೆ ನೋಟೀಸ್‌ನಲ್ಲಿ ನೀಡಲಾಗಿದೆ.

Leave a Comment