ರಾಷ್ಟ್ರೀಯ ವಿಪತ್ತು ಘೋಷಣೆಗೆ ಸಿಪಿಐ ಆಗ್ರಹ

ಕಲಬುರಗಿ ಆ 25: ಅತ್ಯಂತ ಭೀಕರ ಸ್ವರೂಪದ ಪ್ರವಾಹ ರಾಜ್ಯದ ಸುಮಾರು 18 ಜಿಲ್ಲೆಗಳ ಜನರ ಬಾಳನ್ನು  ಸರ್ವನಾಶ ಮಾಡಿಬಿಟ್ಟಿದೆ.ಈ ಹಿನ್ನೆಲೆಯಲ್ಲಿ ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಹಕಾರ್ಯದರ್ಶಿ ಡಾ. ಕೆ.ಎಸ್ ಜನಾರ್ಧನ ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪಕ್ಷದ ಮುಖಂಡರ ತಂಡವು ಜಿಲ್ಲೆಯ ಭೀಮಾನದಿ ತೀರದ ಪ್ರವಾಹಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ರೈತರ ಹೊಲ ಮತ್ತು ಬೆಳೆ ನಷ್ಟ ಪರಿಹಾರವಾಗಿ ಒಂದು ಎಕರೆಗೆ ಕನಿಷ್ಟ 10 ಸಾವಿರ ರೂ ನೀಡಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಪ್ರತಿನಿಧಿಸುವ 25 ಜನ ಬಿಜೆಪಿ ಸಂಸದರು ಮತ್ತು ಅವರದೇ ಆಡಳಿತವಿರುವ ರಾಜ್ಯ ಸರ್ಕಾರವಿದ್ದರೂ ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಮೀನಮೇಷ ಎಣಿಸುತ್ತಿದೆ ಎಂದು ದೂರಿದ ಅವರು  ಪ್ರಧಾನಮಂತ್ರಿಗಳು ಇತ್ತ ಬಾರದಿರುವದು ವಿಷಾದನೀಯ ಎಂದರು.

ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು 10 ಲಕ್ಷ ರೂ,ಪಂಪಸೆಟ್ ವ್ಯವಸ್ಥೆ ರಿಪೇರಿಗೆ ಪ್ರತಿ ರೈತರಿಗೆ 1.5 ಲಕ್ಷ ರೂ ಪರಿಹಾರ ನೀಡಬೇಕು.ಹಾನಿಯಾದ ಜಮೀನುಗಳನ್ನು ಮೊದಲಿನ ಸ್ಥಿತಿಗೆ ತರಬೇಕು. ತಾತ್ಕಾಲಿಕವಾಗಿ ಕೇಂದ್ರವು ರಾಜ್ಯಕ್ಕೆ 5 ಸಾವಿರ ಕೋಟಿ ರೂ ಪರಿಹಾರ  ಬಿಡುಗಡೆ ಮಾಡಲು ಆಗ್ರಹಿಸಿದರು

ಸುದ್ದಿಗೋಷ್ಠಿಯಲ್ಲಿ ಭೀಮಾಶಂಕರ ಮಾಡಿಯಾಳ, ಮೌಲಾಮುಲ್ಲಾ, ಫಾತಿಮಾ ಹಟ್ಟಿ ಉಪಸ್ಥಿತರಿದ್ದರು..

Leave a Comment