ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ಧಾರವಾಡ,ಸೆ12-ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಗುಂಗರಗಟ್ಟಿ, ಧಾರವಾಡದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ  ಎಮ್. ಎನ್. ನಾಗರಾಜ, ಭಾ.ಪೋ.ಸೇ., ಪೋಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ಪೋಲೀಸ್ ಕಮೀಷನರೇಟ, ಹುಬ್ಬಳ್ಳಿ ರವರು ಭಾಗವಹಿಸಿ ಪೋಲೀಸ್ ತರಬೇತಾರ್ಥಿಗಳಿಂದ ಗೌರವವಂದನೆ ಸ್ವೀಕರಿಸಿದರು. ಮೂರು ಸುತ್ತು ಕುಶಾಲತೋಪ ಹಾರಿಸುವ ಜೊತೆಗೆ ಮೌನಾಚರಣೆ ಮಾಡಿ ಅರಣ್ಯ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ಎರಡು ನಿಮಿಶ ಮೌನಾಚರಣೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಎ. ರಾಧಾದೇವಿ, ಭಾ.ಅ.ಸೇ. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, (ಮಾನವ ಸಂಪನ್ಮೂಲ ಅಭಿವೃದ್ಧಿ), ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಧಾರವಾಡ ರವರು ವಹಿಸಿದ್ದರು.
ಮುಖ್ಯ ಅತಿಥಿ  ಎಮ್. ಎನ್. ನಾಗರಾಜ ರವರು ಮಾತನಾಡಿ ಸಮಾಜದಲ್ಲಿರುವ ಸಮಾಜಘಾತುಕರನ್ನು ಅತೀ ಸುಲಭವಾಗಿ ಸದೆಬಡಿಯಬಹುದು. ಆದರೆ ಯಾವುದೇ ಮಾತುಗಳನ್ನು ಬರದ ವನ್ಯಜೀವಿಗಳನ್ನು ನಿರ್ವಹಿಸುವುದು ಅತೀ ಕಷ್ಟಕರವಾಗಿದೆ. ದಟ್ಟವಾದ ಕಾನನದಲ್ಲಿ ಅತೀ ಹೆಚ್ಚಿನ ತಾಂತ್ರಿಕತೆಯ ಆಯುಧಗಳನ್ನು ಹೊಂದಿರುವ ಅರಣ್ಯ ಕಳ್ಳರನ್ನು & ವನ್ಯಜೀವಿ ಕಳ್ಳಬೇಟೆ ಚೋರರನ್ನು ಹಿಡಿಯುವುದು ಅತೀ ಕಷ್ಟದ ಕೆಲಸ. ಇಂತಹ ಕೆಲಸಗಳನ್ನು ಮಾಡುತ್ತಿರುವ ಅರಣ್ಯ ಇಲಾಖೆ ಸರ್ವಕಾಲಕ್ಕೂ ಅಭಿನಂದನರ್ಹವಾಗಿದೆ. ಅರಣ್ಯ ಇಲಾಖೆಯ ಕೆಲಸ ಅತ್ಯಂತ ಪವಿತ್ರವಾದದ್ದು. ತೆರೆದ ಖಜಾನೆಯಂತಿದ್ದ ಅರಣ್ಯ ಸಂಪತ್ತನ್ನು ಕಳ್ಳರಿಂದ ಸಂರಕ್ಷಿಸಿ ಈ ಭೂಮಿಯ ಉಳುವಿಗೆ ಕಾರಣವಾದ ಸಸ್ಯ ಸಂಪತ್ತನ್ನು ಕಾಪಾಡುತ್ತಿರುವ ನೀವುಗಳೆಲ್ಲಾ ಪುಣ್ಯವಂತರು. ಈ ರೀತಿಯ ಉತ್ತಮ ಕಾರ್ಯ ಮಾಡುತ್ತಿರುವ ಅರಣ್ಯ ಇಲಾಖೆಯ ಈ ಸಮಾರಂಭದಲ್ಲಿ ಭಾಗವಹಿಸಿದ ನನಗೆ ಹೆಮ್ಮೆ ಎನಿಸುತ್ತದೆ. ಅರಣ್ಯ ಸಂಪತ್ತನ್ನು ಕಾಪಾಡುವಲ್ಲಿ ತಮ್ಮ ಪ್ರಾಣ ಬಲಿದಾನ ಮಾಡಿದ ಅರಣ್ಯ ಹುತಾತ್ಮರ ಬಗ್ಗೆ ಕಂಬನಿ ಮಿಡಿಯದೇ ಅವರ ಬಗ್ಗೆ ಹೆಮ್ಮೆ ಪಡಬೇಕೆಂದು ನುಡಿದರು.
ಅಕಾಡೆಮಿಯ ಆವರಣದಲ್ಲಿ ಹೊಸದಾಗಿ ನಿರ್ಮಿಸಿದ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಸರ್ವರೂ ಹೂಗುಚ್ಛ ಸಮರ್ಪಿಸಿ ಗೌರವ ವಂದನೆ ಸಲ್ಲಿಸಿದರು.
ಶ್ರೀಮತಿ ದೀಪ ಜೆ. ಕಾಂಟ್ರ್ಯಾಕ್ಟರ್, ಭಾ.ಅ.ಸೇ., ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಧಾರವಾಡರವರು ಅರಣ್ಯ ಹುತಾತ್ಮರ ದಿನಾಚರಣೆ ಇತಿಹಾಸ ಬಗ್ಗೆ ವಿವರ ನೀಡಿದರು.  ಪಿ. ಎಸ್. ವರೂರ ರವರು ಅರಣ್ಯ ಹುತಾತ್ಮರ ನಾಮಸ್ಮರಣೆ ಮಾಡಿದರು. ಕಾರ್ಯಕ್ರಮದಲ್ಲಿ  ಎಮ್.ಎಚ್.ಎ. ಶೇಖ, ಸಮಾಲೋಚಕರು, ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿಯ ಅಧಿಕಾರಿ & ಸಿಬ್ಬಂದಿಗಳು, ಸಂಪನ್ಮೂಲ ವ್ಯಕ್ತಿಗಳು, ನಿವೃತ್ತ ಅರಣ್ಯ ಅಧಿಕಾರಿಗಳು, ವಲಯ ಅರಣ್ಯ ಅಧಿಕಾರಿ & ಉಪ ವಲಯ ಅರಣ್ಯ ಅಧಿಕಾರಿ ತರಬೇತಾರ್ಥಿಗಳು & ಇತರರು ಭಾಗವಹಿಸಿದ್ದರು.  ಲಕ್ಷ್ಮಣ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು.

Leave a Comment