ರಾಷ್ಟ್ರಪತಿ ಚುನಾವಣೆ ಶಾಸಕರ ಮತ ಚಲಾವಣೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೭ –  ರಾಷ್ಟ್ರಪತಿ ಚುನಾವಣೆಗೆ ವಿಧಾನಸೌಧದಲ್ಲಿ ಇಂದು ನಡೆದ ಮತದಾನದಲ್ಲಿ ಶಾಸಕರು ಸಾಲುಗಟ್ಟಿ ನಿಂತು ಮತ ಚಲಾಯಿಸಿದರು. ಪಕ್ಷ ಭೇದ ಮರೆತು ಹರಟೆ, ಹಾಸ್ಯ, ಪರಸ್ಪರ ಲೇವಡಿ ಮಾಡಿಕೊಂಡು ಮತಚಲಾಯಿಸಿದ್ದು ಕಂಡು ಬಂತು. ವಿಧಾನಸೌಧದ ಮೊದಲನೇ ಮಹಡಿಯ 106 ರಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ರಾಜ್ಯದ ಎಲ್ಲಾ ಪಕ್ಷಗಳ ಶಾಸಕರು ಹುರುಪು ಹುಮ್ಮಸ್ಸಿನಿಂದ  ಮತಚಲಾಯಿಸಿದರು.

ಮತದಾನ ಇಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿಯ ಶಾಸಕ ಸಿ.ಟಿ. ರವಿ ಅವರು ಮೊದಲಿಗರಾಗಿ ಮತ ಹಾಕಿದರು. ನಂತರ ಅಪ್ಪಚ್ಚು ರಂಜನ್, ಆನಂದ್ ಸಿಂಗ್ ಮತದಾನ ಮಾಡಿದರು.

ಸಾಲಿನಲ್ಲಿ ನಿಂತ ಶಾಸಕರುಗಳು

ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಲು ಶಾಸಕರುಗಳು ಮತಗಟ್ಟೆಯ ಹೊರಗೆ ಉದ್ದ ಸಾಲಿನಲ್ಲಿ ನಿಂತು ಮತ ಹಾಕಿದ್ದು ವಿಶೇಷವಾಗಿತ್ತು.  ಮಧ್ಯಾಹ್ನ 12ರ ಹೊತ್ತಿಗೆ ಬಹುಪಾಲು ಶಾಸಕರು ಮತದಾನ ಹಾಕಿದರು. ಮತದಾನಕ್ಕೆ ಸಂಜೆ 5 ಗಂಟೆಯವರೆಗೂ ಅವಕಾಶವಿದೆ.

ಸಂಸದರಿಗೆ ದೆಹಲಿಯ ಸಂಸತ್ ಭವನದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್‌ನ ಸಂಸದ ಪ್ರಕಾಶ್ ಹುಕ್ಕೇರಿ ವಿಶೇಷ ಅನುಮತಿ ಪಡೆದು ವಿಧಾನಸೌಧದಲ್ಲೇ ಮತದಾನ ಮಾಡಿದರು.

ಶಾಸಕಾಂಗ ಪಕ್ಷದ ಸಭೆ

ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಶಾಸಕಾಂಗ ಪಕ್ಷದ ಸಭೆ ವಿಧಾನಸೌಧದಲ್ಲಿ ನಡೆಯಿತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ  ಶಾಸಕರುಗಳಿಗೆ ಮತದಾನದ ಬಗ್ಗೆ ಮಾಹಿತಿ ನೀಡಲಾಯಿತು. ಮತದಾನ ಮಾಡುವ ಸಂದರ್ಭದಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿ ಮುಂದೆ ಮತ ಪತ್ರದಲ್ಲಿ 1 ಸಂಖ್ಯೆಯನ್ನು ಬರೆಯುವಂತೆಯೂ ಶಾಸಕರಿಗೆ ಈ ಸಭೆಯಲ್ಲಿ ಮೂರೂ ಪಕ್ಷಗಳ ಮುಖಂಡರು ಮಾಹಿತಿ ನೀಡಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ವಿಧಾನ ಪರಿಷತ್ ಸದಸ್ಯ ಬೋಸರಾಜ್ ಏಜೆಂಟಾಗಿ ಕಾರ್ಯನಿರ್ವಹಿಸಿದರೆ, ಬಿಜೆಪಿ ಪಕ್ಷದ ಏಜೆಂಟಾಗಿ ಶಾಸಕ ಸುನಿಲ್ ಕುಮಾರ್ ಕಾರ್ಯನಿರ್ವಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನದ ವೇಳೆಗೆ ತಮ್ಮ ಶಾಸಕರ ಜತೆ ಬಂದು ಮತ ಹಾಕಿದರು. ಹಾಗೆಯೇ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರೂ ಸಹ ಮಧ್ಯಾಹ್ನದ ವೇಳೆಗೆ ಮತಗಟ್ಟೆಗೆ ಬಂದು ಮತ ಹಾಕಿದರು.

ದೆಹಲಿಗೆ ಮತ ಪೆಟ್ಟಿಗೆ

ರಾಜ್ಯದ ಶಾಸಕರು ಮತ ಹಾಕಿರುವ ಮತ ಪೆಟ್ಟಿಗೆಯನ್ನು ಇಂದು ಸಂಜೆ ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಸ್. ಮೂರ್ತಿ ಮತ್ತು ಚುನಾವಣಾ ವೀಕ್ಷಕರಾಗಿರುವ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಅಗರ್‌ವಾಲ್‌ರವರು ವಿಮಾನದಲ್ಲಿ ದೆಹಲಿಗೆ ತೆಗೆದುಕೊಂಡು ಹೋಗಿ ಲೋಕಸಭೆಯ ಕಾರ್ಯದರ್ಶಿ ಅವರ ಸುಪರ್ದಿಗೆ ನೀಡಲಿದ್ದಾರೆ.

ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಈ ತಿಂಗಳ 20 ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ಈ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್ ಸ್ಪರ್ಧಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿಯಾಗಿ ಮೀರಾ ಕುಮಾರ್ ಕಣದಲ್ಲಿದ್ದಾರೆ.

Leave a Comment