ರಾಷ್ಟ್ರಪತಿ ಚುನಾವಣೆ ಪ್ರತಿಪಕ್ಷಗಳ ಸಿದ್ಧತೆ

ನವದೆಹಲಿ, ಏ. ೨೧ – ಬರುವ ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ವಿರುದ್ಧ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ತೆರೆಮರೆಯಲ್ಲಿ ಸಿದ್ಧತೆಗಳನ್ನು ನಡೆಸಿವೆ.

ಬಿಹಾರದಲ್ಲಿ ಯಶಸ್ವಿಯಾದ ಮಹಾ ಮೈತ್ರಿಕೂಟ ಮಾದರಿಯಲ್ಲಿ ರಾಷ್ಟ್ರಪತಿ ಚುನಾವಣೆಗೂ ಕಾಂಗ್ರೆಸ್ ಸೇರಿದಂತೆ ಇತರೆ ಎಲ್ಲಾ ವಿರೋಧ ಪಕ್ಷಗಳು ಒಂದಾಗಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಭೂಮಿಕೆ ಸಿದ್ಧಪಡಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿನ್ನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಎನ್‌ಡಿಎ ಮೈತ್ರಿಕೂಟಕ್ಕೆ ಪರ್ಯಾಯವಾಗಿ ಸಮಾನ ಮನಸ್ಕ ಪಕ್ಷಗಳ ಮೈತ್ರಿಕೂಟ ರಚಿಸಿ ರಾಷ್ಟ್ರಪತಿ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿಯ ವೇಗಕ್ಕೆ ಕಡಿವಾಣ ಹಾಕಬೇಕು ಎಂಬ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಮತ್ತೊಂದೆಡೆ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ನಿನ್ನೆ ಭುವನೇಶ್ವರದಲ್ಲಿ ಮಾತುಕತೆ ನಡೆಸಿರುವುದು ಮಹಾ ಮೈತ್ರಿಕೂಟ ರಚನೆಗೆ ಬೆಂಬಲ ವ್ಯಕ್ತವಾಗಿದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಜುಲೈಗೆ ಮುಗಿಯಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಬಿಜೆಪಿಯೇತರ ಪಕ್ಷಗಳು ಪೂರ್ವ ತಯಾರಿ ನಡೆಸಿದೆ.

ಎನ್‌ಡಿಎ ಅಭ್ಯರ್ಥಿ ವಿರುದ್ಧ ಸಮರ್ಥ ಅಭ್ಯರ್ಥಿಯೊಬ್ಬನನ್ನು ಆಯ್ಕೆ ಮಾಡುವ ವಿಚಾರದಲ್ಲಿ ಮಾತುಕತೆ ನಡೆಸಲು ನಾಯಕತ್ವ ವಹಿಸಬೇಕೆಂದು ನಿತೀಶ್ ಕುಮಾರ್, ಸೋನಿಯಾಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.

2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಸಮಾನ ಪಕ್ಷಗಳು ಒಂದಾಗಿ ಮಹಾ ಮೈತ್ರಿಕೂಟ ರಚನೆ ಮಾಡ‌ಬೇಕು ಎಂಬುದು ಜೆ‌ಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಚಿಂತನೆಯಾಗಿದೆ.

ಬಿಹಾರದಲ್ಲಿ ಬಿಜೆಪಿಯನ್ನು ಮಣಿಸಲು ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ಸೇರಿ ಮಹಾ ಮೈತ್ರಿಕೂಟ ರಚನೆ ಮಾಡಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಇದೇ ರೀತಿಯ ಮೈತ್ರಿಕೂಟ ರಚನೆ ಮಾಡುವುದು ಇಂದಿನ ಅಗತ್ಯ ಎಂದು ಈ ನಾಯಕರ ಆಶಯವಾಗಿದೆ.

 

Leave a Comment