ರಾಷ್ಟ್ರಪತಿ ಚುನಾವಣೆ ಜೆಡಿಎಸ್‌ಗೆ ಕೈಕೊಟ್ಟ ಶಾಸಕರು

ಬೆಂಗಳೂರು, ಜು. ೧೭- ಇಂದು ನಡೆದ ರಾಷ್ಟ್ರಪತಿ ಚುನಾವಣೆಗೆ ಜೆಡಿಎಸ್‌ನ ಬಂಡಾಯ ಶಾಸಕರು ಯುಪಿಎ ಅಭ್ಯರ್ಥಿ ಮೀರಾಕುಮಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂಬ ಗೊಂದಲದಲ್ಲಿದ್ದ ಜೆಡಿಎಸ್ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದ ನಂತರ ಮೀರಾಕುಮಾರ್‌ರವರನ್ನೆ ಬೆಂಬಲಿಸಲು ತೀರ್ಮಾನಿಸಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ಚಲುವರಾಯಸ್ವಾಮಿ ಅವರನ್ನು ಹೊರತುಪಡಿಸಿ ಉಳಿದ 6 ಮಂದಿ ಜೆಡಿಎಸ್‌ನ ಬಂಡಾಯ ಶಾಸಕರು ಒಂದಾಗಿ ಬಂದು ಮತ ಹಾಕಿದರು.
 ಬಿರುಸು ಮತದಾನ
ರಾಷ್ಟ್ರಪತಿ ಚುನಾವಣೆಯಲ್ಲಿ ಶಾಸಕರುಗಳು ಉತ್ಸಾಹ ಹಾಗೂ ಲವಲವಿಕೆಯಿಂದ ಮತದಾ ಮಾಡಿದ್ದು, ಬೆಳಿಗ್ಗೆಯೇ ಮತದಾನ ಚುರುಕಾಗಿತ್ತು.
ಮಧ್ಯಾಹ್ನ 12 ಗಂಟೆಯ ವೇಳೆಗೆ ಬಹುತೇಕ ಶಾಸಕರು ಮತ ಚಲಾಯಿಸಿದ್ದರು.
ಜಿಲ್ಲೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯಾ ಕಾಂಗ್ರೆಸ್ ಶಾಸಕರುಗಳು ಒಟ್ಟಾಗಿ ಬಂದು ಮತ ಹಾಕಿದರು.
ಮತ ಹಾಕುವ ಸಂದರ್ಭದಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ ಶಾಸಕರು ಹಾಗೂ ಸಚಿವರುಗಳು ಪಕ್ಷಭೇದ ಮರೆತು ತಮ್ಮ ತಮ್ಮಲ್ಲೆ ಹಾಸ್ಯ ಮಾಡಿಕೊಂಡು ಮತ ಹಾಕಿದ್ದು ಕಂಡು ಬಂತು.
ಮತ ಹಾಕಲು ಬರುತ್ತಿದ್ದ ಶಾಸಕರುಗಳು ಸರದಿ ಸಾಲಿನಲ್ಲಿ ನಿಂತಿದ್ದ ಶಾಸಕರುಗಳ ಕೈ ಕುಲುಕಿ ಉಭಯ ಕುಶಲೋಪಹರಿ ವಿನಿಮಯ ಮಾಡಿಕೊಂಡರು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನಕ್ಕೆ ಆಗಮಿಸಿದಾಗ ಅವರ ಜತೆಗೆ ಸಚಿವರು ಮತ್ತು ಶಾಸಕರುಗಳ ದಂಡೇ ಮತಗಟ್ಟೆಗೆ ಬಂದಿತ್ತು.
ಅದೇ ರೀತಿ ಜೆಡಿಎಸ್‌ನ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್ ಮತಗಟ್ಟೆಗೆ ಬಂದಾಗ ಆಯಾ ಪಕ್ಷದ ಶಾಸಕರುಗಳು ಗುಂಪಾಗಿ ಅವರಿಗೆ ಸಾಥ್ ನೀಡಿದರು.

Leave a Comment