ರಾಷ್ಟ್ರಪತಿ ಒಪ್ಪಿಗೆಗೆ ಬಡ್ತಿ ವಿವಾದ: ವಿಧೇಯಕ ವಾಪಸ್ಸು ಕಳುಹಿಸಿದ ರಾಜ್ಯಪಾಲ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಡಿ. ೭- ರಾಜ್ಯಸರ್ಕಾರಿ ನೌಕರರಿಗೆ ಸೇವಾ ಮುಂಬಡ್ತಿ ನೀಡುವ ಸಂಬಂಧ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನ ಸಂದರ್ಭದಲ್ಲಿ ಉಭಯ ಸದನಗಳಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿರುವ ವಿಧೇಯಕವನ್ನು ರಾಷ್ಟ್ರಪತಿಯವರ ಒಪ್ಪಿಗೆಗೆ ಕಳುಹಿಸಿಕೊಡುವಂತೆ ರಾಜ್ಯಪಾಲ ವಜುಭಾಯಿವಾಲಾ ಅವರು ಸಲಹೆ ಮಾಡಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಅವರು ಇಂದಿಲ್ಲಿ ತಿಳಿಸಿದರು.

ಬೆಂಬಲ ಬೆಲೆ : ರಾಜ್ಯದ ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆದಿರುವ ಶೇಂಗಾ ಬೆಲೆ ಕುಸಿದಿದ್ದು, ರಾಜ್ಯಸರ್ಕಾರ ಮಧ್ಯ ಪ್ರವೇಶ ಮಾಡಿ ಬೆಂಬಲ ಬೆಲೆ ನೀಡಿ ಖರೀದಿಸಲು ತೀರ್ಮಾನಿಸಲಾಗಿದೆ.

ರಾಷ್ಟ್ರಪತಿಯವರ ಅಂಗಳಕ್ಕೆ ಕಳುಹಿಸಿಕೊಡುವಂತೆ ರಾಜ್ಯಪಾಲರು ಮಾಡಿರುವ ಸಲಹೆ ಮೇರೆಗೆ ವಿಧೇಯಕವನ್ನು ಇಂದೇ ರಾಷ್ಟ್ರಪತಿಯವರಿಗೆ ಗೃಹ ಸಚಿವಾಲಯದ ಮೂಲಕ ಕಳುಹಿಸಿಕೊಡಲಾಗುವುದು ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು. ರಾಷ್ಟ್ರಪತಿಯವರಿಗೆ ಕಳುಹಿಸಿಕೊಡುವ ಮುನ್ನ ಅಡ್ವಕೇಟ್ ಜನರಲ್ ಅವರ ಅಭಿಪ್ರಾಯವನ್ನೂ ಪ‌ಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.

ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ವಿಧೇಯಕವನ್ನು ರಾಜ್ಯಪಾಲರಿಗೆ ಅನುಮೋದನೆಗಾಗಿ ಕಳುಹಿಸಿಕೊಡಲಾಗಿತ್ತು. ಎಲ್ಲ ಆಯಾಮಗಳನ್ನು ಪರಾಮರ್ಶಿಸಿದ ನಂತರ ರಾಜ್ಯಪಾಲರು ವಿಧೇಯಕವನ್ನು ರಾಷ್ಟ್ರಪತಿಯವರ ಅಂಗೀಕಾರಕ್ಕೆ ಕಳುಹಿಸಿಕೊಡುವಂತೆ ರಾಜ್ಯಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ನಾವಿದ್ದನ್ನು ಇಂದೇ ರಾಷ್ಟ್ರಪತಿಯವರಿಗೆ ಕಳುಹಿಸಿಕೊಡಲಾಗುವುದು ಎಂದರು. ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ವಿಧೇಯಕವನ್ನು ರೂಪಿಸಿ ಅಂಗೀಕಾರ ಪಡೆಯಲಾಗಿತ್ತು. ಇದನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು ಎಂದ ಅವರು, ಈ ವಿಚಾರದಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಈ ವಿಚಾರದಲ್ಲಿ ವಿಧೇಯಕನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಡುವಂತೆ ಸಲಹೆ ಮಾಡಿದ್ದಾರೆ ಮತ್ತೇನನ್ನು ಹೇಳಿಲ್ಲ ಎಂದರು. ಜ. 15ರೊಳಗೆ ಜೇಷ್ಠತಾ ಪಟ್ಟಿಯನ್ನು ಸಿದ್ಧಮಾಡಬೇಕಾಗಿದೆ. ಅಷ್ಟರೊಳಗಡೆ ವಿಧೇಯಕಕ್ಕೆ ಅಂಗೀಕಾರ ಪಡೆಯಲೆತ್ನಿಸಲಾಗುವುದು ಎಂದರು.

ಬೆಂಬಲ ಬೆಲೆ

ರಾಜ್ಯದ ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆದಿರುವ ಶೇಂಗಾ ಬೆಲೆ ಕುಸಿದಿದ್ದು, ರಾಜ್ಯಸರ್ಕಾರ ಮಧ್ಯ ಪ್ರವೇಶ ಮಾಡಿ ಬೆಂಬಲ ಬೆಲೆ ನೀಡಿ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು. ಪ್ರತಿ ಕ್ವಿಂಟಾಲ್ ಶೇಂಗಾಕ್ಕೆ 4,450 ರೂ. ಬೆಂಬಲ ಬೆಲೆ ನೀಡಿ ಖರೀದಿ ಮಾಡಲಾಗುವುದು. ಇದಕ್ಕಾಗಿ 40 ಖರೀದಿ ಕೇಂದ್ರಗಳನ್ನು ಇಂದೇ ಪ್ರಾರಂಭಮಾಡಲಾಗುವುದು ಎಂದವರು ತಿಳಿಸಿದರು.

ಶೇಂಗಾ ಬೆಳೆದ ರೈತರು 15 ದಿನಗಳೊಳಗೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹಸಿ ಶೇಂಗಾಗಿಂತ ಒಣಗಿಸಿ ಶೇಂಗಾ ಮಾರಾಟಕ್ಕೆ ರೈತರು ಖರೀದಿ ಕೇಂದ್ರಕ್ಕೆ ಪೂರೈಸಬೇಕು ಎಂದು ಮನವಿ ಮಾಡಿದ ಅವರು, ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿಸಲು ಸರ್ಕಾರ 25 ಕೋಟಿ ರೂ. ಮುಂಗಡವಾಗಿ ಬಿಡುಗಡೆ ಮಾಡಿದೆ ಎಂದರು.

ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ತೊಗರಿಯನ್ನು ನಿರೀಕ್ಷೆ ಮೀರಿ ಬೆಳೆಯಲಾಗಿದೆ. ಈ ಬಾರಿ 7 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಉತ್ಪಾದನೆಯಾಗುವ ನಿರೀಕ್ಷೆ ಇದೆ. ತೊಗರಿಗೂ ಪ್ರತಿ ಕ್ವಿಂಟಾಲ್‌ಗೆ 5,450 ರೂ.ಗಳಂತೆ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಲು ಅನುಮತಿ ನೀಡುವಂತೆ ಕೇಂದ್ರಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇನ್ನು ಮನವಿ ಬಂದಿಲ್ಲ ಎಂದರು.

ಮೆಕ್ಕೆಜೋಳವನ್ನೂ ರೈತರು ಅಧಿಕ ಪ್ರಮಾಣದಲ್ಲಿ ಬೆಳೆದಿದ್ದು, ಇದಕ್ಕೂ ಕನಿಷ್ಠ ಬೆಂಬಲ ನೀಡಿ ಖರೀದಿಸಲು ಅವಕಾಶ ನೀಡಬೇಕು ಅಥವಾ ಅನುಮತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೂ ಇನ್ನೂ ಕೇಂದ್ರಸರ್ಕಾರದಿಂದ ಅನುಮತಿ ಬಂದಿಲ್ಲ ಎಂದರು.

ಪಡಿತರ ಮೂಲರ ವಿತರಿಸುವಂತೆ ಕೇಂದ್ರ ಸರ್ಕಾರ ಸಲಹೆ ಮಾಡಿದೆ. ಆದರೆ ರಾಜ್ಯದಲ್ಲಿ ಮೆಕ್ಕೆಜೋಳವನ್ನು ಯಾರು ಬಳಸುವುದಿಲ್ಲ. ಉತ್ತರ ಭಾರತದ ರಾಜ್ಯಗಳಲ್ಲಿ ಬಳಕೆ ಮಾಡುವುದರಿಂದ ಮೆಕ್ಕೆಜೋಳ ಖರೀದಿಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಲಾಗಿದೆ ಎಂದರು.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಮಂತ್ರಿ ಸೇರಿದಂತೆ ಕೇಂದ್ರ ಕೃಷಿ ಹಾಗೂ ಆಹಾರ ಮತ್ತು ಕೇಂದ್ರಸರ್ಕಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರಿಗೂ ಪತ್ರ ಬರೆದಿದ್ದಾರೆ ಎಂದರು. ರಾಜ್ಯಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡಿ ವಿವಿಧ ಧಾನ್ಯಗಳನ್ನು ಖರೀದಿಸಿರುವ ಸಂಬಂಧ ಕೇಂದ್ರಸರ್ಕಾರ ರಾಜ್ಯಕ್ಕೆ ಇದುವರೆಗೂ 1387 ಕೋಟಿ ರೂ. ಬಾಕಿ ನೀಡಬೇಕಾಗಿದೆ ಎಂದು ಅವರು ಹೇಳಿದರು.

Leave a Comment