ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಕಸರತ್ತು

ನವದೆಹಲಿ, ಜೂ. ೧೯ – ಮುಂದಿನ ತಿಂಗಳ ೧೭ರಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಡೆಯುತ್ತಿರುವ ಕಸರತ್ತು ತೀವ್ರಗೊಂಡಿದ್ದು, ಆಡಳಿತಾರೂಡ ಬಿಜೆಪಿ, ಸಂಸದೀಯ ಮಂಡಳಿ ಇಂದು ಸಭೆ ಸೇರಿ ದೀರ್ಘ ಚರ್ಚೆ ನಡೆಸಿತು. ಇಂದು ಮಧ್ಯಾಹ್ನದ ಬಳಿಕ ತನ್ನ ಅಭ್ಯರ್ಥಿಯ ಹೆಸರು ಘೋಷಿಸುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಷಾ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಅನಂತ್‌ಕುಮಾರ್ ಸೇರಿದಂತೆ ಹಿರಿಯ ಸದಸ್ಯರು ಭಾಗವಹಿಸಿದ್ದರು.

ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳು ಬಿಜೆಪಿಯ ಮೈತ್ರಿ ಪಕ್ಷಗಳ ಸಹಕಾರ ಪಡೆಯಲು ರಚಿಸಲಾಗಿರುವ ಕೇಂದ್ರದ ಮೂವರು ಸಚಿವರುಗಳ ಸಮಿತಿಯು, ವಿವಿಧ ಪಕ್ಷಗಳ ಜತೆಗಿನ ಚರ್ಚೆಯ ಸಾರಾಂಶವನ್ನು ಸಭೆಯಲ್ಲಿ ವಿವರಿಸಿದ ಬಳಿಕ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಮಧ್ಯೆ ಎಡಪಕ್ಷಗಳ ಮುಖಂಡ ಸೀತಾರಾಂ ಯೆಚೂರಿ ಅವರು ದೆಹಲಿಯಲ್ಲಿ ಪ್ರತಿಕ್ರಿಯಿಸಿ, ಎನ್‌ಡಿಎ ತನ್ನ ಅಭ್ಯರ್ಥಿಯನ್ನು ಅಖೈರುಗೊಳಿಸಿದ ಬಳಿಕ ನಮ್ಮ ಅಭ್ಯರ್ಥಿಯ ಹೆಸರು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಚುನಾವಣೆ ಸಂಬಂಧ ವಿವಿಧ ಪಕ್ಷಗಳ ಜತೆ ಚರ್ಚಿಸಲು ರಚಿಸಲಾಗಿರುವ ಮೂವರು ಸದಸ್ಯರ ಸಮಿತಿಯ ಸದಸ್ಯರಾಗಿರುವ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು ಮತ್ತು ರಾಜನಾಥ್ ಸಿಂಗ್ ಇವರುಗಳು ಇಂದಿನ ಸಂಸದೀಯ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಸಭೆಯ ಮುಂದೆ ವಿವಿಧ ಪಕ್ಷಗಳ ಸಮಾಲೋಚನೆಯ ಮಾಹಿತಿ ನೀಡಿದರು.

ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷವಾದ ಕಾಂಗ್ರೆಸ್ ಸಹಕಾರ ಪಡೆದು ಸರ್ವಪಕ್ಷಗಳಿಗೂ ಸಮ್ಮತವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಅವಿರೋಧ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸಿದೆ.

ಈಗಾಗಲೇ ಬಿಜೆಪಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಮುಲಾಯಂಸಿಂಗ್ ಯಾದವ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ಜತೆ ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಸಂಬಂಧ ಸಮಾಲೋಚನೆ ನಡೆಸಿದೆ.

ಕಳೆದ ಎರಡು ರಾಷ್ಟ್ರಪತಿ ಚುನಾವಣೆಯಲ್ಲಿ ಶಿವಸೇನೆ, ಪ್ರಣವ್ ಮುಖರ್ಜಿ ಮತ್ತು ಪ್ರತಿಭಾ ಪಾಟೀಲ್ ಅವರನ್ನು ಬೆಂಬಲಿಸಿತ್ತು. ಶುಕ್ರವಾರದೊಳಗೆ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಆಯ್ಕೆಯ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸಕೈಗೊಳ್ಳಲಿದ್ದಾರೆ.

Leave a Comment