‘ರಾಷ್ಟ್ರದ ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಳ್ಳಿ’

ಮಂಗಳೂರು, ನ.೧೪- ಸಂಪಾದನೆಯೊಂದೇ ಜೀವನದ ಗುರಿಯಾಗಬಾರದು. ಹೊಸತನದ ವಾತಾವರಣಕ್ಕಾಗಿ ಕನಸು ಕಟ್ಟುವ ಅದಕ್ಕಾಗಿ ಶ್ರಮಿಸುವ ಉತ್ಸಾಹ ನಮ್ಮಲಿದ್ದಾಗ ಮಾತ್ರ ಕನಸಿನ ಕರ್ನಾಟಕ, ರಾಷ್ಟ್ರ ನಿರ್ಮಾಣದ ಕನಸು ನನಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅವಕಾಶಗಳ ಹೊಸ ಸಾಧ್ಯತೆಯನ್ನು ತೆರೆಯುವ ಪ್ರಯತ್ನ ನಡೆಸಬೇಕು. ಬೆಂಗಳೂರು ಹೊರತಾಗಿ ಕರಾವಳಿಯ ಭಾಗದಲ್ಲಿಯೂ ಹಾರ್ಡ್‌ವೇರ್ ಪಾರ್ಕ್‌ಗಳ ನಿರ್ಮಾಣ ಸಾಧ್ಯತೆಯನ್ನು ಸಾಕಾರಗೊಳಿಸಿ ರಾಷ್ಟ್ರದ ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಂಡು ಮುನ್ನಡೆಯಬೇಕು ಎಂದು ಖ್ಯಾತ ಚಿಂತಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಶ್ವದ ದೊಡ್ಡ ರಾಷ್ಟ್ರಗಳಿಗಿಂತ ಹಿರಿದಾದ ಮತ್ತು ಸಹಸ್ರಾರು ವರ್ಷಗಳ ಹೆಮ್ಮೆಯ ಪರಂಪರೆ ಭಾರತದ್ದಾಗಿದೆ. ನಮ್ಮ ನಡೆ ನುಡಿ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸಬೇಕು. ಕರ್ನಾಟಕದ ಗೌರವವನ್ನು ವಿಶ್ವ ಮಟ್ಟದಲ್ಲಿ ಎತ್ತರಕ್ಕೇರಿಸುವುದೇ ನಮ್ಮ ಗುರಿ ಎನ್ನುವ ಸಂಕಲ್ಪದೊಂದಿಗೆ ಮುನ್ನಡೆದಾಗ ಸಾರ್ಥಕ ಬೆಳವಣಿಗೆ ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ಸುಂದರ ಬದುಕಿಗಾಗಿ ನಮ್ಮ ಇತಿಹಾಸ ಮತ್ತು ಜೀವನೋಲ್ಲಾಸಕ್ಕಾಗಿ ಸಾಹಿತ್ಯದ ಜತೆ ನಾವು ಬೆರೆಯಬೇಕು ಎಂದವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಘಟಕ ಸಂಯೋಜಕರಾದ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತಾಧಿಕಾರಿ ಎಂ.ಗಣೇಶ್ ಕಾಮತ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಗಣೇಶ್ ನಾಯಕ್ ವಂದಿಸಿದರು. ಹರೀಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವಿತರಣೆ, ವಿದ್ಯಾರ್ಥಿಗಳಿಂದ ಕನ್ನಡದ ಜನಪ್ರಿಯ ಗೀತೆಗಳ ಸಮೂಹಗಾಯನ ನಡೆಯಿತು.

Leave a Comment