ರಾಯುಡು ಬಿಟ್ಟಿದನ್ನು ಸಮರ್ಥಿಸಿಕೊಂಡ ಪ್ರಸಾದ್

ಮುಂಬೈ. ಏ.15. ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಸೋಮವಾರ ವಿಶ್ವಕಪ್ ಗೆ 15 ಆಟಗಾರರ ತಂಡವನ್ನು ಪ್ರಕಟಿಸಿದ್ದು, ಅನುಭವವಿ ಅಂಬಟಿ ರಾಯುಡು ಅವರನ್ನು ತಂಡದಿಂದ ಕೈ ಬಿಟ್ಟಿರುವುದನ್ನು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಬಳಿಕ ಹಲವು ಆಟಗಾರರಿಗೆ ಮಧ್ಯಮ ಕ್ರಮಾಂಕದಲ್ಲಿ ಆಡುವ ಅವಕಾಶ ನೀಡಿದೆವು. ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಶ್ರೇಯಸ್ ಅಯ್ಯರ್ ಹಾಗೂ ಅಂಬಟಿ ರಾಯುಡು ಅವರಿಗೂ ಹಲವು ಅವಕಾಶಗಳನ್ನು ನೀಡಲಾಯಿತು. ಆದರೆ ರಾಯುಡು ಅವರಿಗಿಂತ ತಂಡಕ್ಕೆ ವಿಜಯ್ ಶಂಕರ್ ಉತ್ತಮ ಕಾಣಿಕೆ ನೀಡಬಲ್ಲರು ಎಂದು ಅವರಿಗೆ ಮಣೆ ಹಾಕಲಾಗಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.

ವಿಜಯ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಸಹ ಮಾಡಬಲ್ಲರು. ಇಂಗ್ಲೆಂಡ್ ವಾತಾವರಣಕ್ಕೆ ತಕ್ಕನಾದ ಆಟಗಾರ ಎಂಬುದು ನಮ್ಮ ನಂಬಿಕೆ. ಅಲ್ಲದೆ ಅವರು ಒಬ್ಬ ಉತ್ತಮ ಕ್ಷೇತ್ರರಕ್ಷಕ. ಈ ಎಲ್ಲ ಅಂಶಗಳನ್ನು ತುಲನೆ ಮಾಡಿದಾಗ ವಿಜಯ್ ಶಂಕರ್ ಅವರಿಗೆ ಅವಕಾಶ ನೀಡಲಾಯಿತು. ಅವರನ್ನು ನಾವು ನಾಲ್ಕನೇ ಸ್ಥಾನದಲ್ಲೂ ಆಡಿಸಬಹುದು. ಈ ಕ್ರಮಾಂಕದಲ್ಲಿ ಕೇದಾರ್ ಜಾದವ್, ದಿನೇಶ್ ಕಾರ್ತಿಕ್ ಅವರು ಸಹ ಆಡಬಲ್ಲರು. ಈಗ ನಮ್ಮ ತಂಡದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಆಯ್ಕೆಗಳು ಬಹಳಷ್ಟಿವೆ ಎಂದು ಹೇಳಿದ್ದಾರೆ.

ರಾಯುಡು ಕಳೆದ ಬಾರಿಯ ವಿಶ್ವಕಪ್ ನಲ್ಲಿ ಸ್ಥಾನ ಪಡೆದಿದ್ದ ಆಟಗಾರ. ಅಲ್ಲದೇ ಈ ಬಾರಿಯೂ ಸ್ಥಾನ ಪಡೆಯುವ ಕನಸು ಕಂಡಿದ್ದರು. ಕೊನೆಯಲ್ಲಿ ರಾಯುಡು ಆಟ ಆಯ್ಕೆ ಸಮಿತಿ ಮನಗೆಲ್ಲುವಲ್ಲಿ ವಿಫಲವಾಗಿದೆ. ಕೆಲವು ವಿಷಯಗಳು ರಾಯುಡು ಪರವಾಲಿದರೆ, ಇನ್ನು ಹಲವು ವಿಜಯ್ ಶಂಕರ್ ಅವರತ್ತ ವಾಲಿವೆ ಎಂದು ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ.

ನುರಿತ ಮೂವರು ವೇಗಿಗಳಿಗೆ ಮಣೆ ಹಾಕಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪ್ರಸಾದ್, ನಾಲ್ಕು ವೇಗಿಗಳು ತಂಡದೊಂದಿಗೆ ಇಂಗ್ಲೆಂಡ್ ಗೆ ತೆರಳಲಿದ್ದಾರೆ ಎಂದಿದ್ದಾರೆ. ಈ ರೇಸ್ ನಲ್ಲಿ ನವದೀಪ್ ಸೈನಿ ಹಾಗೂ ಖಲೀಲ್ ಅಹ್ಮದ್ ಅವರ ಹೆಸರು ಗಳು ಕೇಳಿ ಬರುತ್ತಿವೆ. ಈ ಆಟಗಾರರು ತಂಡದ ಜೊತೆಗೆ ಇರಲಿದ್ದು, ಅವಶ್ಯಕತೆ ಇದ್ದಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Leave a Comment