ರಾಯಲ್ಟಿಗಿಂತ ಅಧಿಕ ಪ್ರಮಾಣ ಮರಳು ಸಾಗಾಣಿಕೆ

 23 ಟಿಪ್ಪರ ಜಪ್ತಿ : 4 ದಿನವಾದರೂ ದಾಖಲಾಗದ ಪ್ರಕರಣ
ರಾಯಚೂರು.ಸೆ.13- ರಾಜ್ಯದ ನೈಸರ್ಗಿಕ ಸಂಪತ್ತಾದ ಮರಳು ಹಾಡು ಹಗಲೇ ಲೂಟಿಯಾಗುತ್ತಿರುವುದು ದಾಖಲೆ ಸಮೇತ ಸಿಕ್ಕಿಬಿದಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಳೆದ ನಾಲ್ಕು ದಿನಗಳಿಂದ ಪ್ರಕರಣ ದಾಖಲಿಸಲು ಮೀನಾಮೇಷವೆಣಿಸುತ್ತಿರುವುದು ಇಲಾಖೆ ಭ್ರಷ್ಟಾಚಾರದ ಕರ್ಮಕಾಂಡ ಹೊರಗಿಟ್ಟಿದೆ.
ದಿ.10 ರಂದು ಮ್ಯಾದರಗೋಳ ಗ್ರಾಮದ ಮರಳು ಸಂಗ್ರಹ ಕೇಂದ್ರದಿಂದ 23 ಟಿಪ್ಪರಗಳಲ್ಲಿ ಸಾಗಿಸಲಾಗುತ್ತಿದ್ದ ಅಕ್ರಮ ಮರಳು ನಗರಗುಂಡಾ ಗ್ರಾಮದಲ್ಲಿ ಸಾರ್ವಜನಿಕರೇ ಹಿಡಿದು ತಪಾಸಣೆಗೊಳಪಡಿಸಿದಾಗ ಮರಳು ಗುತ್ತೇದಾರರ ಅಕ್ರಮ ಮತ್ತು ಗಣಿ ಇಲಾಖೆ ಭ್ರಷ್ಟಾಚಾರ ಜಗದ್ಜಾಹಿರಗೊಂಡಿದೆ. 16 ಮೆಟ್ರಿಕ್ ಟನ್ ರಾಯಲ್ಟಿ ಮೇರೆಗೆ ಪ್ರತಿ ಟಿಪ್ಪರ 37 ಮೆಟ್ರಿಕ್ ಟನ್ ಮರಳು ಸಾಗಿಸುತ್ತಿರುವುದು ಟಿಪ್ಪರ ತೂಕ ಮಾಡಿದಾಗ ಖಚಿತಪಟ್ಟಿದೆ.
ಈ ಎಲ್ಲಾ 23 ಟಿಪ್ಪರ ದೇವದುರ್ಗ ಠಾಣೆಯಲ್ಲಿ ನಿಲ್ಲಿಸಲಾಗಿದೆ. ಆರ್‌ಟಿಓ ಅಧಿಕಾರಿ ಪ್ರತಿ ಟಿಪ್ಪರ ನಿಗದಿತ ಪ್ರಮಾಣಕ್ಕಿಂತ ಅಧಿಕ ಮರಳು ಸಾಗಾಣಿಕೆ ಆರೋಪದ ಮೇರೆಗೆ ದಂಡ ವಿಧಿಸಿದ್ದಾರೆ. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾತ್ರ ಇನ್ನೂವರೆಗೂ ರಾಜ್ಯದ ನೈಸರ್ಗಿಕ ಸಂಪತ್ತಾದ ಮರಳು ಕಳುವಿಗೆ ಸಂಬಂಧಿಸಿದ ಒಂದೇ ಒಂದು ಪ್ರಕರಣ ದಾಖಲೆಗೆ ಮುಂದಾಗದಿರುವುದು ಅಚ್ಚರಿ ಮೂಡಿಸಿದೆ.
ಮರಳು ಗುತ್ತಿಗೆ ಮತ್ತು ನಿರ್ವಹಣಾ ಸಂಪೂರ್ಣ ಜವಾಬ್ದಾರಿ ಹೊಂದಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಮಗೆ ಸೇರಿದ ಬೆಲೆ ಬಾಳುವ ಮರಳು ಹಾಡು ಹಗಲೇ ಕಳುವಿಗೆ ಸಂಬಂಧಿಸಿ ಕನಿಷ್ಟ ಪ್ರಕರಣ ದಾಖಲಿಸಲು ಮುಂದಾಗದಿರುವುದು ಇಲಾಖೆ ಅಧಿಕಾರಿಗಳು ಗುತ್ತೇದಾರರೊಂದಿಗೆ ಶಾಮೀಲಾಗಿದ್ದಾರೆನ್ನುವ ಆರೋಪ ಕೇಳಿ ಬರುವಂತೆ ಮಾಡಿದೆ.
ಕಳೆದ ನಾಲ್ಕು ದಿನಗಳಿಂದ ರಾಜ್ಯದ ನೈಸರ್ಗಿಕ ಸಂಪತ್ತು ಕೊಳ್ಳೆ ಹೊಡೆದ ಘಟನೆಗೆ ಸಂಬಂಧಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸದಿರಲು ಕಾರಣವೇನು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳಾದ ಪುಷ್ಟಲತಾ ಅವರನ್ನು ದೇವದುರ್ಗದ ವರದಿಗಾರರೊಬ್ಬರು ಪ್ರಶ್ನಿಸಿದಾಗ ಟಿಪ್ಪರಗಳ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಗುತ್ತೇದಾರರಿಗೂ ನೋಟೀಸ್ ಜಾರಿಗೊಳಿಸಲಾಗುತ್ತದೆಂದು ಉತ್ತರಿಸಿದರೇ ವಿನಃ, ನಿಗದಿತ ರಾಯಲ್ಟಿಗಿಂತ ಅಧಿಕ ಪ್ರಮಾಣದ ಮರಳು ಸಾಗಿಸಲು ಕಾರಣರಾದ ಗುತ್ತೇದಾರರ ಮೇಲೆ ಪ್ರಕರಣ ದಾಖಲಿಸುವ ಬಗ್ಗೆ ಚಕಾರವೆತ್ತದಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿದೆ.
ಟೆಂಡರ್ ನೀಡುವಾಗ ಗುತ್ತೇದಾರರಿಗೆ ನಿರ್ದಿಷ್ಟ ಷರತ್ತು ವಿಧಿಸಲಾಗಿರುತ್ತದೆ. ಷರತ್ತು ಉಲ್ಲಂಘಿಸಿ ಮರಳು ಸಾಗಾಣಿಕೆ ಮಾಡುವಂತಿಲ್ಲ. ಷರತ್ತು ಉಲ್ಲಂಘಿಸಿದ ಪ್ರಕರಣ ಪುನರ್ವತಿಯಾದರೇ ಟೆಂಡರ್ ರದ್ದು ಪಡಿಸಬೇಕೆನ್ನುವುದು ಒಂದು ಷರತ್ತು. ಆದರೆ, ಪದೇ ಪದೇ ಅಕ್ರಮ ಮರಳು ಸಾಗಾಣಿಕೆ ಪ್ರಕರಣ ಬಯಲಾಗುತ್ತಿದ್ದರೂ, ಇಲ್ಲಿವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಿಸದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈಗ 16 ಮಟ್ರಿಕ್ ಟನ್ ರಾಯಲ್ಟಿ ಮೇರೆಗೆ 37 ಮೆಟ್ರಿಕ್ ಟನ್ ಮರಳು ಸಾಗಿಸುತ್ತಿರುವುದು ದಾಖಲೆಗಳ ಸಮೇತ ಸಿಕ್ಕಿಬಿದ್ದಿದ್ದರೂ, ಪ್ರಕರಣ ದಾಖಲಿಸಲು ಅಧಿಕಾರಿಗಳು ಹಿಂದೆ-ಮುಂದೆ ನೋಡುತ್ತಿರುವುದು ಮರಳು ಗುತ್ತಿಗೆಯ ಪ್ರಭಾವ ಮತ್ತು ಕೊಡುಕೊಳ್ಳುವಿಕೆಯ ವ್ಯವಹಾರಕ್ಕೆ ಇಲಾಖಾಧಿಕಾರಿಗಳು ಒಳಗಾಗಿದೆ ಎನ್ನುವ ಅನುಮಾನಕ್ಕೆಡೆ ಮಾಡಿದೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯ ನಿರ್ದೇಶಕರು, ಕಾರ್ಯದರ್ಶಿಗಳು ಗಮನ ಹರಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸುವರೇ? ಭ್ರಷ್ಟಾಚಾರ ನಿಗ್ರಹದಳ ಈ ಘಟನೆಯಲ್ಲಿ ಸ್ವಯಂ ಪ್ರಕರಣಕ್ಕೆ ಮುಂದಾಗುವ ಸಾಧ್ಯತೆಗಳಿವೆಯೇ? ಎನ್ನುವುದು ಕುತೂಹಲ ಮೂಡಿಸಿದೆ.

Leave a Comment