ರಾಯಚೂರು ವಿಶ್ವವಿದ್ಯಾಲಯ : ಸ್ಥಾಪನೆ ವಿಳಂಬ ಖಂಡನೀಯ

ಶೈಕ್ಷಣಿಕ ವರ್ಷದಿಂದ ಪ್ರವೇಶಾರಂಭಕ್ಕೆ ಒತ್ತಾಯ
* ಸದನದಲ್ಲಿ ಚರ್ಚೆಗೆ ನಿರ್ಧಾರ
ರಾಯಚೂರು.ಅ.09- ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನೊಳಗೊಂಡು ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯಪಾಲರು, ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡಿಸಿದ ವಿಧಾನ ಪರಿಷತ್ ಸದಸ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಅವರು ಈ ವಿಷಯ ಗಂಭೀರ ಸ್ವೀಕರಿಸಿ, ಅಧಿವೇಶನದಲ್ಲಿ ಚರ್ಚಿಸುವುದಾಗಿ ಹೋರಾಟ ನಡೆಸುವುದಾಗಿ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಂಬರುವ ಶೈಕ್ಷಣಿಕ ವರ್ಷದಿಂದ ರಾಯಚೂರು ವಿಶ್ವವಿದ್ಯಾಲಯ ಪ್ರವೇಶ ಆರಂಭಕ್ಕೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ, ರಾಜ್ಯಪಾಲರದಿಂದ ಅನುಮೋದನೆ ಪಡೆದು ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಬೇಕೆಂದು ಆಗ್ರಹಿಸಿದ ಅವರು, ಪ್ರಸಕ್ತ ಅಧಿವೇಶನ ಹತ್ತು ದಿನಗಳ ಅವಧಿಗೆ ನಡೆಸುವಂತೆ ಒತ್ತಾಯಿಸಲಾಗುತ್ತದೆಂದರು.
2018 ಫೆಬ್ರವರಿ 23 ರಂದು ವಿಶ್ವವಿದ್ಯಾಲಯದ ಸ್ಥಾಪನೆಗೆ ಸಂಬಂಧಿಸಿ, ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. 2018 ಮಾರ್ಚ್ 26 ರಂದು ವಿಶೇಷಾಧಿಕಾರಿ ನೇಮಿಸಲಾಗಿತ್ತು. ರಾಯಚೂರು ವಿವಿ ಸ್ಥಾಪನೆಗೆ ಸಂಬಂಧಿಸಿ, ರಾಜ್ಯಪಾಲರ ಅನುಮತಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ, ಈ ಬಗ್ಗೆ ರಾಜ್ಯಪಾಲರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನಂತರ ಅಂದಿನ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರನ್ನು ಭೇಟಿಯಾಗಿ, ವಿಶ್ವವಿದ್ಯಾಲಯ ಬಗ್ಗೆ ಸಂಪುಟದಲ್ಲಿ ಚರ್ಚಿಸಿ, ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿತ್ತು.
ಇದರನ್ವಯ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ, ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಅನುಮೋದನೆ ನೀಡುವ ಬದಲು ವಿಶ್ವವಿದ್ಯಾಲಯ ಸ್ಥಾಪನೆಗೆ ಸುಗ್ರೀವಾಜ್ಞೆಯ ಅಗತ್ಯವೇನಿದೆಂದು ಪ್ರಶ್ನಿಸಿರುವುದು ಖಂಡನೀಯವಾಗಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯಪಾಲರು ಯಾವ ಕಾರಣಕ್ಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡುತ್ತಿಲ್ಲವೆಂದು ಅವರು ಪ್ರಶ್ನಿಸಿದರು.
ನೀತಿ ಆಯೋಗದ ಮಹತ್ವಾಕಾಂಕ್ಷಿ ಯೋಜನೆಯಡಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಶೈಕ್ಷಣಿಕ, ಆರ್ಥಿಕ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒಂದೆಡೆ ವಿಶೇಷ ಒತ್ತು ನೀಡುವ ಪ್ರಯತ್ನ ನಡೆಯುತ್ತಿದ್ದರೇ, ಮತ್ತೊಂದೆಡೆ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ವಿಶ್ವವಿದ್ಯಾಲಯ ಸ್ಥಾಪನೆಗೆ ವಿಳಂಬ ನೀತಿ ಅನುಸರಿಸುತ್ತಿರುವುದು ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶಕ್ಕೆ ಹಿನ್ನೆಡೆಯಾಗುವಂತಾಗಿದೆ.
ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿ, ವಿಧಾನಸೌಧದ ಒಳಗೆ ಮತ್ತು ಹೊರ ಭಾಗದಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷ ಮತ್ತು ವಿವಿಧ ಸಂಘ-ಸಂಸ್ಥೆ ನಿರ್ಧರಿಸಿವೆ. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಆರಂಭಕ್ಕೆ ಸಂಬಂಧಿಸಿ ವಿವಿ ಆರಂಭಿಸುವಂತೆ ಸರ್ಕಾರದ ಮೇಲೆ ಒತ್ತಡವೇರಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲ ಅವರ ಗಮನಕ್ಕೂ ತರಲಾಗುತ್ತದೆ.
ಈ ಭಾಗದ ಆಡಳಿತರೂಢ ಪಕ್ಷದ ಶಾಸಕರು, ವಿಶ್ವವಿದ್ಯಾಲಯ ಸ್ಥಾಪನೆಗೆ ಸ್ಪಂದಿಸುವಂತೆ ಮನವಿ ಮಾಡಲಾಗುತ್ತದೆಂದ ಅವರು, ವಿಶ್ವವಿದ್ಯಾಲಯ ಸ್ಥಾಪನೆಯಿಂದ ಈ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಭಾರೀ ಬೆಂಬಲ ದೊರೆತಂತಾಗುತ್ತದೆಂದರು.
ವಿಶ್ವವಿದ್ಯಾಲಯ ಸ್ಥಾಪನೆ ಹೋರಾಟ ಸಮಿತಿ ಮುಖಂಡರಾದ ರಜಾಕ್ ಉಸ್ತಾದ್ ಅವರು ಮಾತನಾಡುತ್ತಾ, ರಾಜ್ಯದಲ್ಲಿ ಇಲ್ಲಿವರೆಗೂ ವಿವಿ ಘೋಷಣೆಯ ನಂತರ ಎರಡು, ಮೂರು ವರ್ಷ ಕಳೆದರೂ, ವಿಶ್ವವಿದ್ಯಾಲಯ ಸ್ಥಾಪನೆಗೊಳ್ಳದಿರುವುದು ರಾಯಚೂರು ಹೊರತು ಪಡಿಸಿದರೇ, ಮತ್ತೊಂದು ಉದಾಹರಣೆ ಘಟನೆಗಳಿಲ್ಲ.
ರಾಜ್ಯಪಾಲರು ಸುಗ್ರೀವಾಜ್ಞೆ ತಿರಸ್ಕರಿಸುವುದನ್ನು ಖಂಡಿಸುತ್ತೇವೆ. ರಾಜ್ಯ ಸರ್ಕಾರ ವಿವಿ ಸ್ಥಾಪನೆಗೆ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಪ್ರಶ್ನಿಸಿ ಕಳೆದ ಎರಡು ವರ್ಷಗಳಿಂದ ವಿವಿ ಸ್ಥಾಪನೆ ನೆನೆಗುದಿಗೆ ಬೀಳುವಂತೆ ಮಾಡಿರುವುದು ಯಾವ ಕಾರಣಕ್ಕೆ. ಈ ಅವಧಿಯಲ್ಲಿ ರಾಜ್ಯಪಾಲರು ಮೂರು ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿಸಿದ್ದಾರೆ. ಆದರೆ, ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡದಿರಲು ಕಾರಣವೇನು?
ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ 580 ಕಾಲೇಜುಗಳು ನೋಂದಾಯಿಸಿಕೊಂಡಿವೆ. ಇಷ್ಟೊಂದು ಸಂಖ್ಯೆಯ ಕಾಲೇಜುಗಳನ್ನೊಳಗೊಂಡ ಮತ್ತೊಂದು ವಿಶ್ವವಿದ್ಯಾಲಯ ರಾಜ್ಯದಲ್ಲಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬೋಧನೆ ಮತ್ತು ಪರೀಕ್ಷೆ ನಿರ್ವಹಿಸಲು ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ರಾಯಚೂರು, ಯಾದಗಿರಿ ಜಿಲ್ಲೆಗಳನ್ನೊಳಗೊಂಡು ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ವಿ.ನಾಯಕ, ಶಾಸಕ ದದ್ದಲ ಬಸವನಗೌಡ, ಜಯವಂತರಾವ್ ಪತಂಗೆ, ಬಸವರಾಜ ರೆಡ್ಡಿ, ಜಯಣ್ಣ, ಶಿವಮೂರ್ತಿ, ಅಶೋಕ ಜೈನ್, ಅಮರೇಗೌಡ ಹಂಚಿನಾಳ, ವೀರೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment