ರಾಮ ಮಂದಿರ ನಿಮಾಣಕ್ಕೆ ಹೆಚ್ಚಿದ ಒತ್ತಡ -ಜೂ.3 ಸಾಧು ಸಂತರ ಸಭೆ 

ಮೇ 24. ಲೋಕಸಭಾ ಚುನಾವಣೆಯಲ್ಲಿ ಎರಡನೇ ಅವಧಿಗೂ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಮ ಮಂದಿರ ನಿರ್ಮಾಣ ಸವಾಲಾಗಿ ಪರಿಣಮಿಸಿದ್ದು, ಸಾಧು ಸಂತರ ಒತ್ತಡ ಹೆಚ್ಚಿದೆ.

ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣದ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ವಿಶ್ವ ಹಿಂದೂ ಪರಿಷತ್ ಹಾಗೂ ರಾಮ ಜನ್ಮಭೂಮಿ ನ್ಯಾಸ್, ಜೂನ್ ಮೊದಲ ವಾರದಲ್ಲಿ ದೇಶದ ಪ್ರಮುಖ ಸಾಧು ಸಂತರ ಸಭೆ ಕರೆದಿದೆ.

ಮಾಹಿತಿಗಳ ಪ್ರಕಾರ, ಜೂನ್ 7 ರಿಂದ 15ರ ವರೆಗೆ ರಾಮ ನ್ಯಾಸ್ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ ದಾಸರ ಜಯಂತ್ಯುತ್ಸವ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳಲಿರುವ ಸಾಧು ಸಂತರ ಜೊತೆ ಮಂದಿರ ನಿರ್ಮಾಣದ ಚರ್ಚೆ ನಡೆಯಲಿದೆ.  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಜಯಂತ್ಯುತ್ಸವದಲ್ಲಿ ಭಾಗಿಯಾಗಲಿದ್ದಾರೆ.

ರಾಮಜನ್ಮಭೂಮಿ ವಿವಾದ ಪರಿಹಾರಕ್ಕೆ ಸುಪ್ರೀಂಕೋರ್ಟ್ ನಿಂದ ನೇಮಕಗೊಂಡಿರುವ ಮಧ್ಯಸ್ಥಿಕೆದಾರರ ತ್ರಿಸದಸ್ಯ ಸಮಿತಿಯ ಬಗ್ಗೆ ರಾಮ ಜನ್ಮಭೂಮಿ ನ್ಯಾಸ್ ಅಸಮಾಧಾನ ವ್ಯಕ್ತಪಡಿಸಿದೆ.  ವಿವಾದದ ಕುರಿತು ಈ ಸಮಿತಿಯು ತನ್ನ ನಿರ್ಧಾರ ತಿಳಿಸಲು 2019 ಆಗಸ್ಟ್ 15 ರ ವರೆಗೆ ಕಾಲಾವಕಾಶ ತೆಗೆದುಕೊಂಡಿದೆ.

ಸಭೆಯ ಕುರಿತು ಮಾಹಿತಿ ನೀಡಿರುವ ನ್ಯಾಸ್ ಸದಸ್ಯ ಮಹಾಂತ ಕಮಲ್ ನಯನ್ ದಾಸ್, “ರಾಮಮಂದಿರ ವಿವಾದ ಕುರಿತು ಜೂನ್ 3 ರಂದು ಅಯೋಧ್ಯೆಯಲ್ಲಿ ಬೃಹತ್ ಸಭೆ ನಡೆಯಲಿದೆ.  ದೇಶದ ವಿವಿಧೆಡೆಯಿರುವ ಪ್ರಮುಖ ಸಂತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.  ಸಭೆಯ ಅಂತಿಮ ನಿರ್ಧಾರವನ್ನು ಜೂನ್ 15ರಂದು ಇತರ ಸಾಧು, ಸಂತರ ಜೊತೆ ಹಂಚಿಕೊಳ್ಳಲಾಗುವುದು” ಎಂದಿದ್ದಾರೆ.

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದವನ್ನು ಸುಪ್ರೀಂಕೋರ್ಟ್ ಮೂವರು ಸದಸ್ಯರ ಮಧ್ಯಸ್ಥಿತಾ ಸಮಿತಿಗೆ ವಹಿಸಿದೆ.  ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ್ ಎಫ್ ಎಂದ ಕಲಿಫುಲ್ಲಾ ಸಮಿತಿಯ ನೇತೃತ್ವ ವಹಿಸಿದ್ದಾರೆ.  ಶ್ರೀ ಶ್ರೀ ರವಿಶಂಕರ್ ಮತ್ತು ವಕೀಲ ಹಾಗೂ ಮಧ್ಯಸ್ಥಿಕಾ ನಿಪುಣ ಶ್ರೀರಾಮ್ ಪಂಚು ಸಮಿತಿಯ ಇತರ ಸದಸ್ಯರಾಗಿದ್ದಾರೆ.

ವಿಶ್ವ ಹಿಂದೂ ಪರಿಷತ್ ಹಾಗೂ ರಾಮಜನ್ಮಭೂಮಿ ನ್ಯಾಸ್ ಆಯೋಜಿಸಿರುವ ಸಭೆಯಲ್ಲಿ ವಿವಾದಿತ 2.77 ಎಕರೆ ವಿವಾದಿತ ಪ್ರದೇಶದ ಸುತ್ತಲಿನ 67 ಎಕರೆ ನಿರ್ವಿವಾದಿತ ಭೂಮಿಯನ್ನು ಅದರ ಮೂಲ ಮಾಲೀಕರಿಗೆ ವಹಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

ವಿವಾದಿತ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರಾ ಮತ್ತು ರಾಮ್ ಲಾಲಾಗೆ ಸಮನಾಗಿ ಹಂಚಿಕೆ ಮಾಡುವಂತೆ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ಸುಪ್ರೀಂಕೋರ್ಟ್ ಗೆ 14 ಅರ್ಜಿಗಳನ್ನು ಸಲ್ಲಿಸಲಾಗಿದೆ.

Leave a Comment