‘ರಾಮ ಜನಿಸಿದ್ದು ಅಯೋಧ್ಯೆಯಲ್ಲಿ ಎಂದು ಮುಸ್ಲಿಮರಿಗೂ ಗೊತ್ತು’

ನವದೆಹಲಿ, ಅ.೧೮- ಅಯೋಧ್ಯೆಯಲ್ಲಿ ಜನಿಸಿದ್ದು ಪ್ರವಾದಿ ಮುಹಮ್ಮದ್ ಅಲ್ಲ, ಭಗವಾನ್ ರಾಮ ಎಂದು ಇಡೀ ವಿಶ್ವ ಮತ್ತು ಮುಸ್ಲಿಂ ಸಮುದಾಯಕ್ಕೂ ಗೊತ್ತಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯೋಧ್ಯೆ ತೀರ್ಪು ಬಂದ ಕೂಡಲೇ ಆ ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು. ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷವನ್ನು ಬೆಂಬಲಿಸುವುದಾಗಿ ತಿಳಿಸಿದ ರಾಮದೇವ್ ದೇಶ ಅಭಿವೃದ್ಧಿಯಾಗಬೇಕು ಎಂದರೆ ರಾಜ್ಯ ಮತ್ತು ಕೇಂದ್ರದಲ್ಲಿ ಸ್ಥಿರ ಸರ್ಕಾರಗಳ ಅವಶ್ಯಕತೆ ಇದೆ ಎಂದು ತಿಳಿಸಿದರು. ಯಾವ ಪಕ್ಷಕ್ಕೆ ಅಧಿಕಾರ ನೀಡಿದರೆ ಮುಂದಿನ ೧೦-೧೫ ವರ್ಷದಲ್ಲಿ ಭಾರತ ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಯುರೋಪ್ ನಂತಹ ಬಲಿಷ್ಠ ರಾಷ್ಟ್ರಗಳ ವಿರುದ್ಧ ತಲೆ ಎತ್ತಿ ನಿಲ್ಲುತ್ತದೆ ಎಂದು ನಾವು ಯೋಚಿಸಬೇಕು. ಸ್ಥಿರ ರಾಜಕೀಯ ಮತ್ತು ಉತ್ತಮ ಆಡಳಿತಕ್ಕಾಗಿ ನಾವು ಬಲವಾದ ಪಕ್ಷಕ್ಕೆ ಅಧಿಕಾರ ನೀಡಬೇಕಾಗಿದೆ ಎಂದು ರಾಮದೇವ್ ಸಲಹೆ ನೀಡಿದರು.

ಇದೇ ವೇಳೆ ಜನರು ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದು ಹೇಳಿದ ಅವರು, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಹೊಗಳಿದರು. ಖಟ್ಟರ್ ಗೆ ಯಾವುದೇ ಆಸ್ತಿ ಇಲ್ಲ ಮತ್ತು ಅವರು ಪ್ರಾಮಾಣಿಕರು. ಮನೋಹರ್ ಲಾಲ್ ಖಟ್ಟರ್ ಒಳ್ಳೆಯ ಮನುಷ್ಯ ಮತ್ತು ಅವರು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಹಾಡಿಹೊಗಳಿದರು. ೩೭೦ ನೇ ವಿಧಿಯನ್ನು ರದ್ದುಪಡಿಸಿದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದ ರಾಮದೇವ್, ಸರ್ದಾರ್ ಪಟೇಲ್ ನಂತರ ಮೋದಿ ಮತ್ತು ಶಾ ಒಂದು ರಾಷ್ಟ್ರ, ಒಂದು ಸಂವಿಧಾನ ಮತ್ತು ಒಂದು ಧ್ವಜದ ಕಲ್ಪನೆಯನ್ನು ತಂದರು. ಇದು ನರೇಂದ್ರ ಮೋದಿ-ಅಮಿತ್ ಶಾ ಸರ್ಕಾರದ ಮೇಲೆ ಜನರ ನಂಬಿಕೆಯನ್ನು ಬಲಪಡಿಸಿದೆ. ಎಲ್ಲಾ ರಾಜಕೀಯ ಮತ್ತು ಸಾಮಾಜಿಕ ಅಡೆತಡೆಗಳನ್ನು ಅಮಿತ್ ಶಾ ಮತ್ತು ಪಿಎಂ ಮೋದಿ ದೂರ ಮಾಡಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಸೈದ್ಧಾಂತಿಕ ಭಯೋತ್ಪಾದನೆ ನಡೆಯುತ್ತಿದೆ. ದಲಿತವಾಡಿ ಮತ್ತು ಕೆಲವು ಸಮಾಜವಾದಿಗಳು ನಮ್ಮವರ ವಿರುದ್ಧ ದ್ವೇಷವನ್ನು ಹರಡುತ್ತಿದ್ದಾರೆ. ಇದನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದ ಅವರು ವಿಧಾನ ಸಭೆಚುನಾವಣೆಯಲ್ಲಿ ಹರ್ಯಾಣ ಮತ್ತು ಮಹಾರಾಷ್ಟ್ರದ ಎರಡು ರಾಜ್ಯದ ಎಲ್ಲ ಜನರು ಹೊರಗೆ ಬಂದು ಮತ ಹಾಕಬೇಕು ಎಂದು ಮನವಿ ಮಾಡಿದರು.

Leave a Comment