ರಾಮರಥ ಯಾತ್ರೆಗೆ ಚಾಲನೆ

ಅಯೋಧ್ಯೆ, ಫೆ. ೧೩- ರಾಮಜನ್ಮ ಭೂಮಿ ವಿವಾದ ಪ್ರಕರಣದ ಅಂತಿಮ ವಿಚಾರಣೆ ಪ್ರಾರಂಭಕ್ಕೆ ಕೆಲವೇ ದಿನಗಳು ಇರುವಂತೆ ಅಯೋಧ್ಯೆಯಿಂದ ರಾಮರಥಯಾತ್ರೆ ಮತ್ತೆ ಇಂದು ಅಯೋಧ್ಯೆಯಿಂದ ಆರಂಭವಾಗಿದೆ.

  • ರಥಯಾತ್ರೆ ಮತ್ತೆ ಇಂದಿನಿಂದ ಆರಂಭವಾಗಿದೆ.
  • ಎರಡು ತಿಂಗಳ ಕಾಲ ಆರು ರಾಜ್ಯಗಳಲ್ಲಿ ಸಂಚಾರ.
  • ರಾಮೇಶ್ವರಂನಲ್ಲಿ ಮುಕ್ತಾಯ.
  • ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪರ ದೇಶದಲ್ಲಿ ಅಲೆ ಎಬ್ಬಿಸುವುದು ಇವರ ಗುರಿ.
  • ಕರ ಸೇವಕ್ ಪುರಂನಿಂದ ವಿಶ್ವ ಹಿಂದೂ ಪರಿಷತ್ ಯಾತ್ರೆಗೆ ಚಾಲನೆ ನೀಡಿದೆ.
  • 1990ರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ರಥಯಾತ್ರೆ ನಡೆಸಿದ್ದರು.
  • ರಾಮಜನ್ಮಭೂಮಿ ವಿವಾದ ಸುಪ್ರೀಂಕೋರ್ಟಿನಲ್ಲಿ ಅಂತಿಮ ವಿಚಾರಣೆಗೆ ಬರುವ ಕೆಲವೇ ದಿನಗಳ ಮುನ್ನ ಈ ರಥಯಾತ್ರೆ.
  • ಇದರಿಂದ ಮತ್ತೆ ರಾಷ್ಟ್ರದಲ್ಲಿ ಕೋಮು ಸೌಹಾರ್ದಕ್ಕೆ ಧರ್ಕೆಯಾಗಬಹುದು ಎಂದು ಎಡಪಕ್ಷಗಳೂ ಸೇರಿದಂತೆ ಕೆಲ ವಿರೋಧ ಪಕ್ಷಗಳಿಂದ ಅಸಮಾಧಾನ ವ್ಯಕ್ತ.

ರಾಮಜನ್ಮ ಭೂಮಿ -ಬಾಬರಿ ಮಸೀದಿ ವಿವಾದ ಪ್ರಕರಣದ ಮೇಲೆ ಸುಪ್ರೀಂಕೋರ್ಟ್ ಅಂತಿಮ ವಿಚಾರಣೆಯನ್ನು ಕೆಲವೇ ದಿನಗಳಲ್ಲಿ ಕೈಗೆತ್ತಿಕೊಳ್ಳುತ್ತಿರುವಂತೆ ರಾಮಮಂದಿರ ನಿರ್ಮಾಣಕ್ಕೆ ಮತ್ತಷ್ಟು ಕಾವು ತುಂಬಲು ಬಲಪಂಥೀಯ ಹಿಂದೂ ಸಂಘಟನೆ ರಾಮ ರಾಜ್ಯರಥಯಾತ್ರೆಯನ್ನು ಇಂದು ಅಯೋಧ್ಯೆಯಿಂದ ಆರಂಭಿಸಿದೆ.

ಇಂದು ಅಯೋಧ್ಯೆಯಲ್ಲಿ ಆರಂಭವಾಗಿರುವ ರಾಮರಾಜ್ಯ ರಥಯಾತ್ರೆ ಆರು ರಾಜ್ಯಗಳಲ್ಲಿ ಸಂಚಾರ ಮಾಡಿ ರಾಮೇಶ್ವರದಲ್ಲಿ ಮುಕ್ತಾಯಗೊಳ್ಳುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪೂರಕ ವಾತಾವರಣ ಸೃಷ್ಠಿಸಲು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ 1990ರಲ್ಲಿ ರಥಯಾತ್ರೆ ಆರಂಭಿಸಿದ್ದರು.

ಇದರಿಂದ ಇಡೀ ದೇಶದಲ್ಲಿ ರಾಮಮಂದಿರ ನಿರ್ಮಾಣ ಪರ ಅಲೆ ಎದ್ದಿತ್ತು. ಈ ಅಲೆಯಲ್ಲೇ ಬಿಜೆಪಿ ರಾಷ್ಟ್ರಮಟ್ಟದಲ್ಲಿ ಮುಂಚೂಣಿಗೆ ಬಂದು ಕೇಂದ್ರದಲ್ಲಿ ಅಧಿಕಾರಕ್ಕೂ ಬಂದಿತ್ತು.

ಆದರೆ, ನಂತರದಲ್ಲಿ ಬಿಜೆಪಿ ರಾಮಮಂದಿರ ವಿಷಯವನ್ನು ತನ್ನ ಪ್ರಣಾಳಿಕೆಯಲ್ಲಿ ಪ್ರಧಾನವಾಗಿ ಪ್ರಸ್ತಾಪಿಸುತ್ತಿರಲಿಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯವನ್ನು ಮತ್ತೆ ಬಿಜೆಪಿ ಮುಂಚೂಣಿಗೆ ತಂದು ನಿಲ್ಲಿಸಿದೆ.

ಈ ಹಿನ್ನೆಲೆಯಲ್ಲಿಯೇ ಇಂದು ಅಯೋಧ್ಯೆಯ ಕರಸೇವಕ್ ಪುರಂನಿಂದ ರಾಮರಾಜ್ಯ ರಥಯಾತ್ರೆಗೆ ಚಾಲನೆ ನೀಡಲಾಗಿದೆ. ಟಾಟಾ ಟ್ರಂಕ್ ಅನ್ನು ರಾಮರಥವಾಗಿ ಮಾರ್ಪಡಿಸಲಾಗಿದ್ದು, ಮಂದಿರದ ಮಾದರಿಯಲ್ಲಿಯೇ ಅದನ್ನು ಶೃಂಗರಿಸಲಾಗಿದೆ. ಇಂದಿನಿಂದ ಆರಂಭವಾಗಿರುವ ಈ ರಥ ಉತ್ತರ ಪ್ರದೇಶ, ಮಧ್ಯ ಪ್ರದೇಶದಿಂದ ಮೊದಲುಗೊಂಡು ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳಲ್ಲಿ ಸಂಚಾರ ಮಾಡಿ ಕೊನೆಯಲ್ಲಿ ತಮಿಳುನಾಡಿನ ರಾಮೇಶ್ವರಂನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ವಿಶ್ವ ಹಿಂದೂ ಪರಿಷತ್ ಮೂಲಗಳು ತಿಳಿಸಿವೆ.

ಈ ರಥಯಾತ್ರೆಯ ಅಧಿಕೃತ ಆಯೋಜಕತ್ವ, ಮಹಾರಾಷ್ಟ್ರ ಮೂಲದ ಒಂದು ಸಾಮಾಜಿಕ ಸಂಘಟನೆಯದಾಗಿದ್ದು, ಇದರಲ್ಲಿ ಪ್ರಮುಖವಾಗಿ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಕೆಲವು ಬಲಪಂಥೀಯ ಸಂಘಟನೆಗಳೂ ಕೈಜೋಡಿಸಿವೆ. ಇದರಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಕೂಡ ಸೇರಿದೆ.

ಯಾತ್ರೆ ಹೊರಟ ರಾಮರಥ

ರಾಮಮಂದಿರ ನಿರ್ಮಾಣದ ಪರವಾಗಿ ದೇಶದಲ್ಲಿ ಮತ್ತೆ ಅಲೆ ಎಬ್ಬಿಸುವ ಉದ್ದೇಶದಿಂದ ಕೂಡಿರುವ ಈ ರಥಯಾತ್ರೆಯ ಬಗ್ಗೆ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಇದರಿಂದ ಮತ್ತೊಮ್ಮೆ ರಾಷ್ಟ್ರದಲ್ಲಿ ಕೋಮು ಸಾಮರಸ್ಯ ಕದಡುತ್ತದೆ ಎಂದು ಎಡಪಕ್ಷಗಳು ಎಚ್ಚರಿಸಿವೆ.

Leave a Comment