ರಾಮಕೃಷ್ಣ ಸೇವಾಶ್ರಮದ ರಜತ ಮಹೋತ್ಸವ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ.೨೩- ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಅಂಗ ಸಂಸ್ಥೆಗಳ ರಜತ ಮಹೋತ್ಸವ ಆಗಸ್ಟ್ 26 ರಂದು ಜರುಗಲಿದೆ.

ಅಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ವಾಸವಿ ಕನ್ವೆನ್ಷನ್ ಸೆಂಟರ್‌ನಲ್ಲಿ ರಜತ ಮಹೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಆಶ್ರಮದ ಅಧ್ಯಕ್ಷರಾದ ಜಪಾನಂದ ಸ್ವಾಮಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 11.00 ಗಂಟೆಗೆ ರಾಜ್ಯಾಪಾಲ ವಜುಭಾಯ್ ವಾಲಾ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಉಡುಪಿ ವಿಶ್ವೇಶ್ವರ ತೀರ್ಥ ಶ್ರೀಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಮುಖ್ಯ ಅಥಿತಿಗಳಾಗಿ ಕೇಂದ್ರ ಸಚಿವ ಅನಂತ್ ಕುಮಾರ್, ಆಗಮಿಸಲಿದ್ದಾರೆ. ಉಳಿದಂತೆ ವಿನಾಯಕ ಆನಂದ್ ಜೀ ಮಹಾರಾಜ್, ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಶಾಸಕ ಎಲ್.ಎ.ರವಿ ಸುಬ್ರಹ್ಮಣ್ಯ ಇತರ ಅಧಿಕಾರಿಗಳು ಉಪಸ್ಥಿತರಿರುವರು.

ಮಧ್ಯಾಹ್ನ 2.30 ರಿಂದ ಸಂಸ್ಥೆಯ ಸೇವಾ ಯಜ್ಞದ ವಿಡಿಯೋ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 3.15 ರಿಂದ 3.45 ರವರೆಗೆ ಆಶ್ರಮದ ಭಕ್ತ ವೃಂದದವರಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ. ನಂತರ ಜಪಾನಂದ ಮಹಾರಾಜ್ ಅವರಿಂದ ಆಶೀರ್ವಚನ ಏರ್ಪಡಿಸಲಾಗಿದೆ ಎಂದರು.

ಸಂಜೆ 5.00 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ತೇಜಸ್ವಿನಿ ಅನಂತ್ ಕುಮಾರ್, ಐಜಿಪಿ ಹರಿ ಶೇಖರನ್ ಆಗಮಿಸಲಿದ್ದಾರೆ ಎಂದರು.

ರಜತ ಮಹೋತ್ಸವದ ಅಂಗವಾಗಿ ಪಾವಗಡದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಬಡವರಿಗೆ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಇಎನ್‌ಟಿ ವಿಭಾಗ ನಿರ್ಮಾಣ ಮಾಡುವುದು. ವಿವೇಕಾನಂದರ ಪ್ರತಿಮೆ ಸ್ಥಾಪಿಸುವುದು.

ಈ ಪ್ರದೇಶದ ನೂರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುವ ಹಾಗೂ ಅಂತರ್ಜಲ ರಕ್ಷಣೆಗೆ ಅಗತ್ಯವಿರುವ ಕಾರ್ಯಕ್ರಮಗಳ ಜಾರಿ ಸೇರಿದಂತೆ ಇನ್ನು ಅನೇಕ ಯೋಜನೆಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.

ವೇದಿಕೆಯಲ್ಲಿ ಆಶ್ರಮದ ಮುಖ್ಯಸ್ಥರಾದ ವಿವೇಕಾನಂದ ರೆಡ್ಡಿ ಇತರರು ಉಪಸ್ಥಿತರಿದ್ದರು.

Leave a Comment