ರಾಡ್‌ಗಳಿಂದ ಮಾರಾಮಾರಿ ನಡೆಸಿದ ಭಂಡಾರ್ಕಾರ್ಸ್ ಕಾಲೇಜು ವಿದ್ಯಾರ್ಥಿಗಳು!

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾದ ತಂಡವೊಂದು ಇಬ್ಬರ ಮೇಲೆ ಸಾಮೂಹಿಕವಾಗಿ ರಾಡುಗಳಿಂದ ಹಲ್ಲೆ ನಡೆಸಿದ ಘಟನೆ ನಿನ್ನೆ ನಡೆಸಿದೆ.

ಜನನಿಬಿಡವಾದ ಕಾಲೇಜು ರಸ್ತೆಯಲ್ಲೆ ಈ ಹಲ್ಲೆ ನಡೆದಿದ್ದು ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ. ಈ ಮಾರಾಮಾರಿಯ ವಿಡಿಯೊ ಕ್ಲಿಪಿಂಗ್‌ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಹಾಡಹಗಲೇ ಹಳೇ ದ್ವೇಷದ ಹಿನ್ನೆಲೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕುಂದಾಪುರ ಪಟ್ಟಣದ ಭಂಡಾರ್‌ಕಾರ್ಸ್ ಕಾಲೇಜು ನುಗ್ಗಿ, ಅಲ್ಲಿನ ವಿದ್ಯಾರ್ಥಿಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಭಂಡಾರ್‌ಕಾರ್ಸ್  ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿ ಮಿಥುನ್ ಹಾಗೂ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಅಕ್ಷಯ್ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆದಾಟ ತಪ್ಪಿಸಲು ಮುಂದಾದ ಕೆಲ ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆಸಿ ವಿದ್ಯಾರ್ಥಿಗಳು ಗಾಯಗೊಳಿಸಿದ್ದಾರೆ.

ಗಣೇಶ್, ಮಿಥುನ್ ಮತ್ತು ಅಕ್ಷಯ್ ನಡುವೆ ಮೊದ್ಲಿನಿಂದಲೂ ಹಳೇ ವೈಷಮ್ಯವಿತ್ತಂತೆ. ಗಣೇಶ್‌ಗೆ ಈ ಹಿಂದೆ ಅಕ್ಷಯ್ ಮತ್ತು ಮಿಥುನ್ ಗುಂಪು ಹಲ್ಲೆ ನಡೆಸಿತ್ತು.  ಇದೇ ಕಾರಣಕ್ಕೆ ದ್ವೇಷ ಸಾಧಿಸುತ್ತಿದ್ದ ಗಣೇಶ್ ತನ್ನ ಸ್ನೇಹಿತರಾದ ನಾಡಾ ಗುಡ್ಡೆಯಂಗಡಿ ಪ್ರದೇಶದ ಕಾಲೇಜೊಂದರ ವಿದ್ಯಾರ್ಥಿಗಳ ಸಹಾಯ ಕೇಳಿದ್ದ. ಸೋಮವಾರ ಮಧ್ಯಾಹ್ನ ಊಟದ ಸಮಯಕ್ಕೆ ಮಿಥುನ್ ಮತ್ತು ಅಕ್ಷಯ್ ಹಾಗೂ ಅವರ ಸ್ನೇಹಿತರು ಕಾಲೇಜು ಕ್ಯಾಂಪಸ್ ನಿಂದ ಹೊರ ಬಂದಿದ್ದರು. ಇದೇ ಸಂದರ್ಭದಲ್ಲಿ ಕಾದು ಕುಳಿತಿದ್ದ ಗಣೇಶ್ ಹಾಗೂ ಆತನ ಹತ್ತು ಜನ ಸ್ನೇಹಿತರು ಗುಂಪು ಗಾಂಧಿ ಮೈದಾನದ ಎದುರುಗಡೆ ರಸ್ತೆಯಲ್ಲಿ ಮಿಥುನ್ ಹಾಗೂ ಅಕ್ಷಯ್ ಮೇಲೆ ಕಬ್ಬಿಣದ ರಾಡಿನಿಂದ ಏಕಾಏಕೀ ಹಲ್ಲೆ ನಡೆಸಿತು.

ಅಷ್ಟೊತ್ತಿಗಾಗಲೇ ಸ್ಥಳೀಯರು ಒಟ್ಟಾಗುತ್ತಿದ್ದಂತೆ ಪುಂಡ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ವಿದ್ಯಾರ್ಥಿಗಳು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕಳೆದ ಕೆಲ ದಶಕಗಳಿಂದ ಶಾಂತವಾಗಿದ್ದ ಭಂಡಾರ್ಕಾರ್ಸ್ ಕಾಲೇಜು ಈಗ ಈ ವಿದ್ಯಾರ್ಥಿಗಳ ಹಲ್ಲೆಯಿಂದ ಮತ್ತೆ ಹಿಂದಿನ ಗಲಾಟೆಯ ದಿನಗಳನ್ನು ನೆನಪಿಸುವಂತೆ ಮಾಡಿದೆ.

Leave a Comment