ರಾಜ್ ಅವರ ಬಾಡೂಟದ ಅಭಿಮಾನ

ಪ್ರತಿ ವರ್ಷ ಏಪ್ರಿಲ್ ಬಂದರೆ ಸಾಕು ಅಣ್ರಾವು ನೆನೆಪು ಮತ್ತೆ ಮತ್ತೆ ಕಾಡುತ್ತದೆ. ಡಾ. ರಾಜ್ ಕುಮಾರ್ ಎಂದರೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಚ್ಚುಮೆಚ್ಚು. ಒಂದು ರೀತಿಯಲ್ಲಿ ಅವರೊಬ್ಬರು ಕನ್ನಡ ಜಾನಪದ ಲೋಕದ ಕಲಾಕಾರ. ಅಲ್ಲದೇ ಏಪ್ರಿಲ್‌ನಲ್ಲಿ ಅವರ ಹುಟ್ಟುಹಬ್ಬ ಹಾಗೂ ಪುಣ್ಯತಿಥಿ ಆಚರಣೆಗಳು ನಡೆಯುವುದರಿಂದ ಅಭಿಮಾನಿಗಳಿಗೆ ಅಣ್ರಾವು ನೆನೆಪು ಕಾಡುವುದು ಸಹಜವೇ ಸರಿ.
ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಅವರ ಚಿತ್ರಗಳ ಕುರಿತು, ಅವರ ನಟನೆಯ ಕುರಿತು, ನಿತ್ಯ ಜೀವನದಲ್ಲಿ ಅವರ ಸರಳತೆಯ ಕುರಿತು ಅನೇಕ ನೈಜ ಘಟನೆಗಳಿವೆ. ತೆರೆಯ ಮೇಲೆ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಜ್ ಕುಮಾರ್, ನಿಜಜೀವನದಲ್ಲಿ ತಮ್ಮ ಸರಳತೆಗಳಿಂದಲೇ ಹೆಸರುವಾಸಿಯಾಗಿದ್ದರು. ಅದರಲ್ಲೂ ಅವರ ಊಟ- ತಿಂಡಿಯ ವೈಖರಿ ಕುರಿತು ಹತ್ತಾರು ರಸವತ್ತಾದ ಅನುಭವಗಳೇ ಇವೆ. ಅವುಗಳಲ್ಲಿ ಬಹುಮುಖ್ಯವಾದದ್ದು. ಅವರು ಬಹಳಷ್ಟು ಇಷ್ಟಪಡುತ್ತಿದ್ದ ಬಾಡೂಟದ ಅಭಿಮಾನ.
ಹೌದು, ಹಳ್ಳಿಗಾಡಿನ ಅನುಭವಗಳನ್ನೇ ಉಂಡುಟ್ಟು ಬೆಳೆದಿದ್ದ ರಾಜ್ ಅವರಿಗೆ ಬಾಡೂಟವೆಂದರೆ ಇನ್ನಿಲ್ಲದ ಹಬ್ಬ. ತಮ್ಮ ಬಿಡುವಿನ ವೇಳೆಯಲ್ಲಾಗಲೀ, ಮನೆಯಲ್ಲಾಗಲೀ, ತಾವು ಶೂಟಿಂಗ್‌ನಲ್ಲಿ ತೊಡಗಿಕೊಳ್ಳುತ್ತಿದ್ದ ಸಂದರ್ಭದಲ್ಲಾಗಲೀ ಅವರು ಹೆಚ್ಚು ಇಷ್ಟಪಡುತ್ತಿದ್ದುದು ಬಾಡೂಟವನ್ನೇ…! ಅಂತಹ ಜನಪದ, ಸಾಂಸ್ಕೃತಿಕ ಮೇರು ಕಲಾವಿದನೊಬ್ಬನ ನೆಚ್ಚಿನ ಬಾಡೂಟದ ಹಲವಾರು ಪ್ರಸಂಗಗಳಲ್ಲಿ ಕೆಲವು ಇಲ್ಲಿವೆ…
ರಾಜ್ ಅವರ ಬಾಡೂಟದ ವೈವಿಧ್ಯಗಳಲ್ಲಿ ಅವರಿಗೆ ಬಹಳ ಇಷ್ಟವಾದದ್ದು ಕುರಿ- ಮೇಕೆಯ ತಲೆಮಾಂಸ. ಅದರಲ್ಲೂ ತಲೆ ಮಾಂಸದ ಸಾರು ಎಂದರೆ ಅವರಿಗೆ ಬಹಳವೇ ಅಚ್ಚುಮೆಚ್ಚು. ಮೈಸೂರಿಗೆ ಶೂಟಿಂಗ್‌ಗೆಂದು ಬಂದಾಗಲೆಲ್ಲ ಅವರು ಹೆಚ್ಚಿನ ಬಾರಿ ತಂಗುತ್ತಿದ್ದುದ್ದು ದಾಸ್ ಪ್ರಕಾಶ್ ಹೋಟೆಲ್‌ನಲ್ಲಿ. ಅಷ್ಟೇ ಅಲ್ಲದೆ ಮೈಸೂರಿನ ಖ್ಯಾತ ಹಳೆಯ ಮಾಂಸಾಹಾರಿ ಹೊಟೇಲ್‌ಗಳಲ್ಲಿ ಒಂದಾದ ಹನುಮಂತು ಹೋಟೆಲ್‌ನ ಪಲಾವ್ ಎಂದರೆ ಅವರಿಗೆ ರುಚಿಯೋ ರುಚಿ…!
ಮೈಸೂರಿನ ಆಸುಪಾಸುಗಳಲ್ಲಿ ಜನಪ್ರಿಯವಾಗಿದ್ದ ಹೋಟೆಲ್‌ಗಳಿಂದ ಊಟ ತರಿಸಿಕೊಳ್ಳುತ್ತಿದ್ದ ರಾಜ್, ಶ್ರೀರಂಗಪಟ್ಟಣದ ಸಮೀಪ ಇರುವ ಬಾಬುರಾಯನ ಕೊಪ್ಪಲಿನ ಭುವನೇಶ್ವರಿ ಮಿಲಿಟರಿ ಹೋಟೆಎಲ್‌ನಿಂದಲೂ ತಲೆಮಾಂಸದ ಸಾರು, ನಾಟಿಕೋಳಿ, ಮುದ್ದೆ ತರಿಸಿ ತನ್ನುತಿದ್ದರು. ಅಷ್ಟೇ ಅಲ್ಲದೆ ಸೆಟ್‌ನಲ್ಲಿದ್ದ ಎಲ್ಲರೊಂದಿಗೂ ಒಟ್ಟಾಗಿ ಕುಳಿತು ಬಾಡೂಟ ಸವಿಯುವುದು ಎಂದರೆ ಅವರಿಗೆ ಯಾವಾಗಲೂ ಖುಷಿ ಎಂದು ನೆನಪಿಸಿಕೊಳ್ಳುತ್ತಾರೆ. ಹಿರಿಯ ರಂಗಕರ್ಮಿ ರಾಜಶೇಖರ ಕದಂಬ.
ರಾಜ್ ಅವರು ಊಟ ಮಾಡುತ್ತಿದ್ದ ಶೈಲಿಯ ಬಗ್ಗೆ ಹೀಗೆನ್ನುತ್ತಾರೆ. ಕದಂಬ ಅವರು ಅವರಿಗೆ ಯಾವಾಗಲೂ ಕುರಿ, ಮೆಕೆಯ ಮಾಂಸದ ಮೂಳೆಯನ್ನು ಚೀಪಿ ಸವಿಯುವುದು ಇಷ್ಟವಾಗಿತ್ತು. ಇದು ಅವರು ಮೊದಲಿನಿಂದಲೂ ತಮ್ಮದೇ ಹಳ್ಳಿಯವರ ಶೈಲಿಯಲ್ಲಿ ರೂಢಿಸಿಕೊಂಡು ಬಂದಿದ್ದ ಬಗೆ. ಅವರು ರಸಾಯನವನ್ನು ಸವಿದು ಆನಂದಿಸುತ್ತಿದ್ದರು ಎಂದು ಕದಂಬ ಅವರು ರಾಜ್ ಊಟದ ಶೈಲಿಯ ಬಗ್ಗೆ ವಿವರಿಸುತ್ತಾರೆ. ಬೆಂಗಳೂರಿಗೆ ನವಯುಗ ಹೋಟೆಲ್‌ನ ಮಾಂಸಾಹಾರವನ್ನೂ ಅವರು ಇಷ್ಟಪಟ್ಟು ತರಿಸಿಕೊಂಡು ತಿನ್ನುತ್ತಿದ್ದರಲ್ಲದೆ, ಕೆಲವು ಬರಿ ತಾವೇ ಅಲ್ಲಿಗೆ ಭೇಟಿ ನೀಡಿ ಊಟ ಮಾಡಿದ್ದನ್ನೂ ಅವರ ಜೊತೆಗಾರರು ಸ್ಮರಿಸುತ್ತಾರೆ.
ಅದು ಒಡಹುಟ್ಟಿದವರು ಸಿನಿಮಾದ ಚಿತ್ರೀಕರಣದ ಸಂದರ್ಭ. ನಟ ಅಂಬರೀಶ್ ಡಾ. ರಾಜ್ ಜೊತೆಗೆ ಸಹೋದರನಾಗಿ ಅಭಿನಯಿಸಿರುವ ಚಿತ್ರವದು. ಶ್ರೀಶಾಂತಿ, ಮಾಧವಿಯೊಂದಿಗೆ ರಾಜ್…. ಅಂಬರೀಶ್ ’‘ನಾನೂ ನಾನೂ ನೀನು” ಎಂಬ ಹಾಡಿನ ಚಿತ್ರೀಕರಣ ಮುಗಿಸಿ ಊಟಕ್ಕೆಂದು ಕುಳಿತಿದ್ದರು. ಆದಾಗಲೇ ಊಟಕ್ಕೆಲ್ಲ ಸಿದ್ಧತೆಯೂ ಆಗಿದ್ದು. ಇನ್ನೇನೋ ಊಟ ಬಡಿಸಬೇಕಿತ್ತು. ಅಷ್ಟರಲ್ಲಾಗಲೇ ರಾಜ್ ಅವರಿಗಾಗಿ, ಚಿತ್ರತಂಡದವರಿಗಾಗಿ ಅಂಬರೀಶ್ ಕುರಿ ಮಾಂಸದೂಟವನ್ನು ತಾವೇ ಮುಂದಾಗಿ ನಿಂತು ಪ್ರೀತಿಯಿಂದ ಸಿದ್ಧಪಡಿಸಿದ್ದರು.
ಅಂದು ಗುರುವಾರ, ಹೇಳಿ ಕೇಳಿ ರಾಜ್ ರಾಘವೇಂದ್ರರ ಭಕ್ತರು. ಸೆಟ್‌ನಲ್ಲಿದ್ದ ಎಲ್ಲರಿಗೂ ರಾಜ್ ಅವರಿಗೆ ಬಾಡೂಟವೆಂದರೆ ಬಹಳವೇ ಇಷ್ಟ ಎಂಬುದು ಗೊತ್ತಿತ್ತು. ಅದನ್ನು ಹೇಳುವುದು ಹೇಗೆ? ಅಳುಕಿನಿಂದಲೇ ಎಲ್ಲರೂ ಇರುವಾಗ ರಾಜ್ ಅವರಿಗೆ ಮಾಂಸದೂಟ ಬಡಿಸಬಹುದೇ, ಇವತ್ತು ಗುರುವಾರ ಸೆಟ್‌ನಲ್ಲಿದ್ದವರು ಕೇಳಿದರು. ಅದಕ್ಕೆ ರಾಜ್ ಅವರು ಅಂಬರೀಶ್ ಅವರ ಪ್ರೀತಿಯಲ್ಲಿ ದೇವರನ್ನು ಕಾಣಬೇಕೇ ಹೊರತು ಗುರುವಾರದಲ್ಲಲ್ಲ ಎಂದು ಹೇಳಿದರು.

Leave a Comment