ರಾಜ್ಯ ಸರ್ಕಾರ ಸತ್ಯಶೋಧನಾ ಸಮಿತಿ ರಚನೆಗೆ ಒತ್ತಾಯ

ಅಂಕಪಟ್ಟಿಯಲ್ಲಿ ಅಧಿಕಾರಿಯ ಸಹಿ, ಆಯೋಗದ ಲಾಂಛನ ಇಲ್ಲ
ಕರ್ನಾಟಕ ಲೋಕಸೇವಾ ಆಯೋಗ 2015ರಲ್ಲಿ ಸುಮಾರು 428 ಹುದ್ದೆಗಳ ಆಯ್ಕೆಯಲ್ಲಿ ನಡೆಸಿರುವ ವ್ಯಾಪಕ ಭ್ರಷ್ಟಾಚಾರ ಮತ್ತು ಅಕ್ರಮಗಳು ದೇಶದ ಗಮನ ಸೆಳೆದಿದ್ದು, ಈ ಹುದ್ದೆಗಳಿಗೆ ನೇಮಕಾತಿ ಸಂಬಂಧಿಸಿದಂತೆ ಮೇ.15, 2017ರಲ್ಲಿ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಡಿಸೆಂಬರ ತಿಂಗಳೊಳಗಾಗಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳನ್ನು ನಡೆಸಿದೆ. ಆದರೆ ಸುಮಾರು 2ವರ್ಷಗಳ ನಂತರ ಡಿ.23,2019ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿರುವುದು ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಾಕ್ಷಿಯಾಗಿದೆ. ಸುಮಾರು 7ದಿನಗಳ ಕಾಲಾವಕಾಶ ನೀಡಿ ಅಯ್ಕೆ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಆಯೋಗ ಅಭ್ಯರ್ಥಿಗಳಿಗೆ ಸೂಚನೆ ನೀಡಿರುವುದು ಹಿಂದೆ ವ್ಯಾಪಕ ಭ್ರಷ್ಟಾಚಾರ ನಡೆದಿರುವುದಕ್ಕೆ ಪುರಾವೆಯಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಆರೋಪಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2014ರ ನೇಮಕಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಕೆ
ಸುಮಾರು 30 ದಿನಗಳ ಕಾಲಾವಕಾಸ ನೀಡಿತ್ತು. ಕೆಪಿಎಸ್ ಸಿ ನಿಯಮಾವಳಿಗಳ ಪ್ರಕಾರ ಕನಿಷ್ಠ 15ದಿನಗಳ ಸಮಯಾವಕಾಶ ನೀಡುವ ಶಿಷ್ಟಾಚಾರವನ್ನು ಗಾಳಿಗೆ ತೂರಿ ಸುಮಾರು 7ದಿನಗಳ ಕಡಿಮೆ ಅವಧಿಯನ್ನು ಆಕ್ಷೇಪಣೆ ಸಲ್ಲಿಕೆಗೆ ನೀಡಿರುವುದರ ಹಿಂದೆ ಭ್ರಷಟಾಚಾರದ ಪ್ರಭಾವ ಎದ್ದು ಕಾಣುತ್ತದೆ. ವಿಶೇಷವಾಗಿ ಈ 7ದಿನಗಳ ಅವಧಿಯಲ್ಲಿ ಕ್ರಿಸ್ಮಸ್ ರಜೆ, 4ನೇ ಶನಿವಾರ ಹಾಗೂ ಭಾನುವಾರ ಸೇರಿದಂತೆ 3ದಿನಗಳ ಸರ್ಕಾರಿ ರಜೆ ಇದ್ದುದನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಬೇಕು. ಹಿಂದೆ ಆಯ್ಕೆಯಾಗಿರುವ ಮತ್ತು ಆಯ್ಕೆಯಾಗದಿರುವ ಅಭ್ಯರ್ಥಿಗಳ ವಿಷಯವಾರು ಅಂಕಗಳನ್ನು ಆಯೋಗ ಪ್ರಕಟಿಸಿದೆ. ಆದರೆ 2015ರ ನೇಮಕಾತಿಗೆ ಸಂಬಂಧಿಸಿದಂತೆ ಕೇವಲ ಆಯ್ಕೆ ಹೊಂದಿರುವ ಅಭ್ಯರ್ಥಿಗಳ ಅಂಕಗಳನ್ನು ಮಾತ್ರ ಇ-ಮೇಲ್ ಮೂಲಕ ಪ್ರಕಟಿಸುವುದರ ಹಿಂದೆ ಸ್ಥಾಪಿತ ಹಿತಾಸಕ್ತಿಗಳ ಹುನ್ನಾರ ಪ್ರಧಾನವಾಗಿ ಕಂಡು ಬರುತ್ತದೆ. ಅಲ್ಲದೆ ಇ-ಮೇಲ್ ಗಳು ಪ್ರಕಟಿಸಿರುವ ಅಂಕಪಟ್ಟಿಯಲ್ಲಿ ಯಾವುದೇ ವಿದ್ಯುನ್ಮಾನ ಭದ್ರತೆ ಸಂಬಂಧಿಸಿದ ಅಧಿಕಾರಿಯ ಸಹಿ ಮತ್ತು ಆಯೋಗದ ಲಾಂಛನ ಕಂಡು ಬಂದಿಲ್ಲ ಎಂದರು.
ನ್ಯಾಯವಂಚಿತ ಅರ್ಹ ಅಭ್ಯರ್ಥಿಗಳು ಮಾಹಿತಿ ಹಕ್ಕು ಅಧಿನಿಯಮ 2005ರನ್ವಯ ಕಾನೂನು ಬದ್ಧವಾಗಿ ಮುಖ್ಯ ಪರೀಕ್ಷೆಯ ವಿಷಯವಾರು ಅಂಕ ಹಾಗೂ ಉತ್ತರ ಪತ್ರಿಕೆಗಳನ್ನು ಒದಗಿಸಲು 31/12/2019ರಲ್ಲಿ ಆಯೋಗವನ್ನು ಸಂಪರ್ಕಿಸಿದ್ದರು. 9/1/2020ರಂದು ಆಯೋಗ ಅಂತಿಮ ಆಯ್ಕೆ ಪಟ್ಟಿಪ್ರಕಟಿಸಿಲ್ಲವಾದ ಕಾರಣ ನೀವು ಕೋರಿರುವ ಮಾಹಿತಿ ಒದಗಿಸಲು ಸಾಧ್ಯವಿಲ್ಲವೆಂಬ ನೆಪ ನೀಡಿ ಮರು ದಿನವೇ 10/1/2020ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿರುವುದು ಅಕ್ರಮ ನೇಮಕಾತಿಗೆ ಸ್ಪಷ್ಟ ಉದಾಹರಣೆಯಾಗಿದೆ. ವಾಸ್ತವವಾಗಿ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಮೌಲ್ಯಮಾಪಕರ ಹೆಸರು, ಸಹಿ ಮತ್ತು ಗುರುತುಗಳು ಇಲ್ಲದಿರುವುದು ಆಯೋಗ ನಡೆಸಿರುವ ಅಕ್ರಮಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ. ರಾಜ್ಯ ಲೋಕಸೇವಾ ಆಯೋಗವು ಉಚ್ಛ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಉತ್ತರ ಪತ್ರಿಕೆಗಳನ್ನು ಕೊಡಲು ನಿರಾಕರಿಸಿರುವುದು ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ. ಇದನ್ನು ಸರ್ಕಾರ ಗಮನಿಸಬೇಕು ಎಂದರು.
ಆಯೋಗ ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆ ಪ್ರತಿ ನೀಡಲು ನಿರಾಕರಿಸಿರುವುದು ಭ್ರಷ್ಟಪ್ರವೃತ್ತಿಗೆ ನೇರ ಸಾಕ್ಷಿ. ಲೋಕಸೇವಾ ಆಯೋಗ ಸ್ಪಷ್ಟವಾಗಿ ಅಕ್ರಮ ನಡೆಸಿದೆ. ಅಂತಿಮ ಆಯ್ಕೆ ಪಟ್ಟಿ 10/1/2020ರ ಸಂಜೆ ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟವಾಗಿದೆ. ಆದರೆ ಇದಕ್ಕೂ ಮೊದಲೇ ಕರ್ನಾಟಕ ಸರ್ಕಾರದ ಮುದ್ರಣಾಲಯದ ವಿಶೆಷ ರಾಜ್ಯಪತ್ರದಲ್ಲಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಯೋಗದ ವೆಬ್ ಸೈಟಿನಲ್ಲಿ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ರಾಜ್ಯಪತ್ರದಲ್ಲಿ ಪ್ರಕಟಿಸಲು ಸರ್ಕಾರದ ಮುದ್ರಣಾಲಯಕ್ಕೆ ಕಳುಹಿಸಿರುವ ಆಯೋಗದ ಕ್ರಮ ಬಹಳಷ್ಟು ಗೂಡಾರ್ಥಗಳನ್ನು ಹೊಂದಿದೆ. ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ್ ನಂತರ ಅಂಕಗಳನ್ನು ದುರುದ್ದೇಶಪೂರ್ವಕವಾಗಿ ತಿದ್ದಿ ಭಾರೀ ಪ್ರಮಾಣದಲ್ಲಿ ಲೋಕಸೇವಾ ಆಯೋಗದ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಭ್ರಷಟಾಚಾರ ನಡೆಸಿರುವ ಹಿನ್ನೆಲೆಯಲ್ಲಿ 2015ರ ನೇಮಕಾತಿಯನ್ನು ರದ್ದುಗೊಳಿಸುವ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಹೊಂದಿದೆ. ಅಲ್ಲದೆ ಉತ್ತರ ಪತ್ರಿಕೆಗಳನ್ನು ಸಂಬಂಧಪಟ್ಟ ವಿಷಯಗಳ ತಜ್ಞರನ್ನು ಒಳಗೊಂಡವಸ್ತುನಿಷ್ಠ ಹಸ್ತಚಾಲಿತ ಮೌಲ್ಯಮಾಪನಕ್ಕೆ ಒಳಪಡಿಸಿ ಅಹರ್ಹ ಅಭ್ಯರ್ಥಿಗಳಿಗೆ ಅಗಿರುವ ಅನ್ಯಾಯವನ್ನು ಸರಿಪಡಿಸಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸತ್ಯಶೋಧನಾ ಸಮಿತಿ ರಚಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕ ಪ್ರೊ. ಬಿ.ಪಿ.ಮಹೇಶ್ಚಂದ್ರಗುರು ಉಪಸ್ಥಿತರಿದ್ದರು.

Leave a Comment