ರಾಜ್ಯ ಸರ್ಕಾರ ಅತಂತ್ರಗೊಳಿಸಲು ಅಮಿತ್ ಷಾ ಭೇಟಿ- ದಿನೇಶ್ ಗುಂಡೂರಾವ್

ಬೆಂಗಳೂರು, ಆ. ೧೩- ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಆಪರೇಷನ್ ಕಮಲ ನಡೆಸುವ ಹಾಗೂ ಕೇಂದ್ರಿಯ ತನಿಖಾ ದಳಗಳನ್ನು ಬಳಸಿಕೊಂಡು ರಾಜ್ಯಸರ್ಕಾರವನ್ನು ಅತಂತ್ರಗೊಳಿಸುವ ಷಡ್ಯಂತ್ರಗಳ ಕಾರ್ಯಸೂಚಿಯನ್ನಿಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಿ ಹಿಂದೂ ಮತಗಳನ್ನು ಧೃವೀಕರಣಗೊಳಿಸುವ ಪ್ರಮುಖ ಅಜಂಡಾ ಅಮಿತ್ ಷಾರವರದ್ದಾಗಿದೆ. ಹಾಗಾಗಿಯೇ ಅವರು ಚುನಾವಣೆಗಳನ್ನು ಗೆಲ್ಲುವುದು ಹೇಗೆ ಎಂಬುದು ನನಗೆ ಗೊತ್ತಿದೆ ಎಂದು ಹೇಳುತ್ತಿರುವುದು ಎಂದು ರಾಜ್ಯ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಚೋದನಕಾರಿ ಹೇಳಿಕೆ ನೀಡಿ ಕೋಮು ಭಾವನೆಗಳನ್ನು ಕೆರಳಿಸಿ, ಕೋಮು ಗಲಭೆ ನಡೆಸುವ ಹುನ್ನಾರ ಬಿಜೆಪಿಯದ್ದಾಗಿದೆ. ಇದೆಲ್ಲ ಇಲ್ಲಿ ನಡೆಯುವುದಿಲ್ಲ ಎಂದ ಅವರು, ಬಿಜೆಪಿ ನಕಾರಾತ್ಮಕ ರಾಜಕಾರಣ ನಡೆಸುತ್ತಿದೆ ಎಂದು ಹರಿಹಾಯ್ದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಅಮಿತ್ ಷಾ ಹೇಳಿದ್ದಾರೆ. ಈ ಮಾತು ಹೇಳಲು ಅವರಿಗೆ ನೈತಿಕತೆ ಇಲ್ಲ. ಭ್ರಷ್ಟರನ್ನು ಅಕ್ಕ-ಪಕ್ಕ ಕೂರಿಸಿಕೊಂಡು ಕಾಂಗ್ರೆಸ್‌ನ ಭ್ರಷ್ಟಾಚಾರದ ಬಗ್ಗೆ ಅಮಿತ್ ಷಾ ಮಾತನಾಡುತ್ತಿರುವುದು ವಿಪರ್ಯಾಸವೇ ಸರಿ ಎಂದ ಅವರ ಮಾತುಗಳು ನಿಜವಾಗಿದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಐಟಿ ದಾಳಿ ಸೇರಿದಂತೆ ಮತ್ತಿತರ ಕೇಂದ್ರ ಏಜೆನ್ಸಿಗಳನ್ನು ಬಳಸಿಕೊಂಡು ಮುಖಂಡರನ್ನು ಹೆದರಿಸಿ, ಬ್ಲಾಕ್‌ಮೇಲ್ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ತಂತ್ರಗಾರಿಕೆ ಅಮಿತ್ ಷಾರವರದ್ದಾಗಿದೆ. ಇವರ ತಂತ್ರಗಾರಿಕೆಗೆ ಈಗಾಗಲೇ ಬಲಿಯಾದ ಎಸ್.ಎಂ ಕೃಷ್ಣ, ಶ್ರೀನಿವಾಸ್ ಪ್ರಸಾದ್ ಬಿಜೆಪಿಯಲ್ಲಿ ಮೂಲೆ ಗುಂಪಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಎಷ್ಟೇ ಸುಳ್ಳು ಹೇಳಲಿ ಚುನಾವಣೆಯಲ್ಲಿ ಅವರ ತಂತ್ರ ಫಲಿಸುವುದಿಲ್ಲ. ಕಾಂಗ್ರೆಸ್ಸೇ ಮತ್ತೆ ಅಧಿಕಾರ ಹಿಡಿಯಲಿದೆ. ಬಿಜೆಪಿಯ ಮಿಷನ್ -50ಕ್ಕೆ ಸೀಮಿತವಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ಬಿಜೆಪಿಯ ವಿಸ್ತಾರಕ ಕಾರ್ಯಕ್ರಮದ ಭಿತ್ತಿಪತ್ರದಲ್ಲೂ ಪ್ರಧಾನಿ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಸುಳ್ಳು ಹೇಳಲಾಗಿದೆ. ಈ ರೀತಿ ಸುಳ್ಳು ಮಾಹಿತಿ ನೀಡಿ ಚುನಾವಣೆ ಗೆಲ್ಲುವ ತಂತ್ರ ನಡೆಯುವುದಿಲ್ಲ ಎಂದ ಅವರು, ಅಮಿತ್ ಷಾ ರಾಜ್ಯಕ್ಕೆ ಯಾವ ರೀತಿ ನ್ಯಾಯ ಒದಗಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ಮಹದಾಯಿ ವಿಚಾರದಲ್ಲಿ ನ್ಯಾಯ ಸಿಕ್ಕಿಲ್ಲ, ರೈತರ ಸಾಲಮನ್ನಾ ಮಾಡಿಲ್ಲ, ರೈತರ ಬೆಳೆ ನಷ್ಟ ವಿಮೆಯಿಂದ ವಿಮಾ ಕಂಪನಿಗಳಿಗೆ ಲಾಭವಾಗಿದೆ. ಇದಕ್ಕೆಲ್ಲ ಅಮಿತ್ ಷಾ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

Leave a Comment