ರಾಜ್ಯೋತ್ಸವ ಪ್ರಶಸ್ತಿಗೆ 128 ಮಂದಿ ಪಟ್ಟಿ ಸಿದ್ಧ

ಬೆಂಗಳೂರು, ಅ. ೨೩- ನಾಡು, ನುಡಿ, ಸಾಹಿತ್ಯ, ಕಲೆ ಸೇರಿದಂತೆ, ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಮಹನೀಯರಿಗೆ ರಾಜ್ಯ ಸರ್ಕಾರ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಗಾಗಿ ಭಾರೀ ಲಾಬಿ ಶುರುವಾಗಿದ್ದು, ಅರ್ಜಿಗಳ ಸಂಖ್ಯೆ ಹನುಮಂತನ ಬಾಲದಂತೆ, ಬೆಳೆದಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ರಾಜ್ಯೋತ್ಸವದ ದಿನಾಚರಣೆಗೆ ಇನ್ನೊಂದು ವಾರ ಬಾಕಿ ಉಳಿದಿದ್ದು, ಅಷ್ಟರೊಳಗೆ ಪ್ರಶಸ್ತಿಗಳನ್ನು ಪ್ರಕಟಿಸಬೇಕಾಗಿದೆ. ಪ್ರಶಸ್ತಿಗಳಿಗಾಗಿ ಆಕಾಂಕ್ಷಿಗಳು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ, ಅವರ ಸಂಪುಟ ಸಹೋದ್ಯೋಗಿಗಳು, ಪ್ರಭಾವಿ ನಾಯಕರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮುಖಂಡರುಗಳ ಮೂಲಕ ಲಾಬಿಯನ್ನು ಮಾಡುತ್ತಿರುವುದು ರಹಸ್ಯವಾಗಿಯೇನೂ ಉಳಿದಿಲ್ಲ.
ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿ ಹಿನ್ನೆಲೆಯಲ್ಲಿ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲು ಮುಂದಾಗಿರುವ ಸರ್ಕಾರ, ಈ ಬಾರಿ 64ನೇ ರಾಜ್ಯೋತ್ಸವದ ಆಚರಣೆ ಅಂಗವಾಗಿ ಅಷ್ಟೇ ಪ್ರಮಾಣದ ಸಂಖ್ಯೆಗೆ ಪ್ರಶಸ್ತಿಗಳನ್ನು ಸೀಮಿತಗೊಳಿಸಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಶಸ್ತಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದ್ದು, ಈಗಾಗಲೇ ಪ್ರಶಸ್ತಿಗಾಗಿ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವುಗಳನ್ನು ಆಳೆದು-ತೂಗಿ ಆಯ್ಕೆ ಮಾಡಬೇಕಾದ ಅನಿವಾರ್ಯ ಸ್ಥಿತಿಗೆ ಸರ್ಕಾರ ತಲುಪಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದರೂ, ಎಲ್ಲಾ ಪ್ರಮುಖ ನೀತಿ ನಿರ್ಧಾರಗಳನ್ನು ಆರ್‌ಎಸ್‌ಎಸ್ ಪಡಸಾಲೆಯಿಂದಲೇ ಕೈಗೊಳ್ಳುತ್ತಿರುವುದರಿಂದ ಪ್ರಶಸ್ತಿಗಳ ಆಯ್ಕೆಯೂ ಅಲ್ಲಿಂದಲೇ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ ಗಣ್ಯಮಾನ್ಯರಿಗೆ ಕೊಡ ಮಾಡುವ ಪ್ರಶಸ್ತಿಗಳಿಗಾಗಿ ಬಂದಿರುವ ಅರ್ಜಿಗಳ ಪೈಕಿ, ಸುಮಾರು 120ಕ್ಕೂ ಹೆಚ್ಚು ಅರ್ಜಿಗಳನ್ನು ಸಂಕ್ಷಿಪ್ತ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಈ ಸಂಖ್ಯೆಯನ್ನು 64ಕ್ಕೆ ಇಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗಾಗಲೇ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡಿರುವವರಲ್ಲಿ ಬಹುತೇಕ ಮಂದಿ ಆರ್‌ಎಸ್‌ಎಸ್ ಗರಡಿಯಿಂದ ಬಂದವರು ಅಥವಾ ಆ ಸಿದ್ಧಾಂತಗಳ ಪರ ಒಲವು ಹೊಂದಿರುವವರೇ ಆಗಿದ್ದಾರೆ ಎಂಬ ಆರೋಪ ಸಾರಸ್ವತ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ರೀತಿಯ ಆರೋಪಕ್ಕೆ ಮುಕ್ತವಾಗಿ ಅರ್ಹತೆ ಆಧಾರದ ಮೇಲೆ ಪ್ರಶಸ್ತಿಗಳ ಆಯ್ಕೆ ನಡೆಯಲಿದೆಯೇ ಎಂಬುದು ಅತಿದೊಡ್ಡ ಪ್ರಶ್ನೆಯಾಗಿದೆ.
ಕನ್ನಡ, ಸಾಹಿತ್ಯ, ಕಲೆ, ಸಂಸ್ಕೃತಿ, ಭಾಷೆ, ನೆಲ, ಜಲ, ನಾಡು, ನುಡಿ, ಶಿಕ್ಷಣ, ವೈದ್ಯಕೀಯ, ಪತ್ರಿಕೋದ್ಯಮ, ಧಾರ್ಮಿಕ, ಕ್ರೀಡೆ ಸೇರಿದಂತೆ, ವಿವಿಧ ಕ್ಷೇತ್ರಗಳ ಗಣ್ಯರನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಮಾಡಬೇಕಾಗಿದೆ.

Leave a Comment