ರಾಜ್ಯಾಧ್ಯಕ್ಷರ ರೇಸ್​ನಲ್ಲಿ ನಿಖಿಲ್ ಹೆಸರಿಲ್ಲ ; ಸಚಿವ ಜಿ.ಟಿ.ಡಿ ಸ್ಪಷ್ಟನೆ

ಮೈಸೂರು. ಜೂ. 16: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್​ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಆ ಸೋಲಿನ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್​. ವಿಶ್ವನಾಥ್​ರಾಜೀನಾಮೆ ನೀಡಿದ್ದರು. ಅಧ್ಯಕ್ಷ ಸ್ಥಾನದ ರೇಸ್​ನಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ಇದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸಚಿವ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
ಜೆಡಿಎಸ್​ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್​. ವಿಶ್ವನಾಥ್ ರಾಜೀನಾಮೆ ನೀಡುತ್ತಿದ್ದಂತೆ ಆ ಹುದ್ದೆಯನ್ನು ಬೇರೆ ಯಾರು ಏರಲಿದ್ದಾರೆ? ಎಂಬ ಚರ್ಚೆಗಳು ಶುರುವಾಗಿದ್ದವು. ಜೆಡಿಎಸ್​ ನಾಯಕರಾದ ವೈ.ಎಸ್​.ವಿ. ದತ್ತ, ಮಧು ಬಂಗಾರಪ್ಪ, ಸಕಲೇಶಪುರದ ಶಾಸಕ ಎಚ್​.ಕೆ. ಕುಮಾರಸ್ವಾಮಿ ಜೊತೆಗೆ ಈ ಬಾರಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿ ಹೀನಾಯ ಸೋಲು ಕಂಡ ನಿಖಿಲ್ ಕುಮಾರಸ್ವಾಮಿ ಹೆಸರೂ ಹರಿದಾಡುತ್ತಿತ್ತು. ಆದರೆ, ನಿಖಿಲ್ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಜಿಟಿಡಿ, ಎಚ್​. ವಿಶ್ವನಾಥ್ ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಅಂಗೀಕಾರ ಆದಮೇಲೆ ಬದಲಾವಣೆಯ ವಿಚಾರದ ಕಡೆ ಗಮನ ನೀಡುತ್ತೇವೆ. ಅವರ ರಾಜೀನಾಮೆ ಅಂಗೀಕಾರ ಆಗುವವರೆಗೂ ಬೇರೆ ಹೆಸರುಗಳ ಬಗ್ಗೆ ಚರ್ಚೆ ಮಾಡುವ ಮಾತೇ ಇಲ್ಲ. ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷರ ರೇಸ್​​ನಲ್ಲಿ ಇಲ್ಲ. ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಯುವ ಘಟಕ ಸ್ಥಾನಕ್ಕೆ ಕೆಲವರು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ವರಿಷ್ಠರೊಂದಿಗೆ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.

Leave a Comment