ರಾಜ್ಯಮಟ್ಟದ ಯುವಜನೋತ್ಸವಕ್ಕೆ ಕ್ಷಣಗಣನೆ…

ಎಂ. ರಮೇಶ್ ಚಿ. ಸಾರಂಗಿ
ತುಮಕೂರು, ಡಿ. ೭- ರಾಜ್ಯದ 100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ ಸಹ ರಾಜ್ಯ ಸರ್ಕಾರ ಕಲ್ಪತರುನಾಡಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮೂರು ದಿನಗಳ ಕಾಲ ನಡೆಯಲಿರುವ ವರ್ಣರಂಜಿತ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಕಲ್ಪತರುನಾಡು ತುಮಕೂರು ಸರ್ವಾಲಂಕೃತಗೊಂಡು ಸಂಪೂರ್ಣ ಸಜ್ಜಾಗಿದ್ದು, ನವವಧುವಿನ ಮನೆಯಂತೆ ಕಂಗೊಳಿಸುತ್ತಿದೆ.

ರಾಜ್ಯದ ವಿವಿಧ ಕಡೆಯಿಂದ ಬರುವ ಕಲಾ ಪ್ರತಿಭೆಗಳು, ಕಲಾಪ್ರಿಯರು, ಕಲಾ ಪೋಷಕರನ್ನು ಸ್ವಾಗತ ಕಮಾನುಗಳು ಆತ್ಮೀಯವಾಗಿ ಸ್ವಾಗತಿಸುತ್ತಿವೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಸಂಘಗಳ ಒಕ್ಕೂಟ, ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯತ್ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಂಡಿರುವ 2018-19ನೇ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಇಂದು ಸಂಜೆ ವಿದ್ಯುತ್ ಚಾಲನೆ ದೊರೆಯಲಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಯುವಜನೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಆದರೆ ಕಲ್ಪತರುನಾಡಿನ ಆರಾಧ್ಯದೈವ, ನಡೆದಾಡುವ ದೇವರು ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಹೆಚ್ಚಿನ ಚಿಕಿತ್ಸೆಗಾಗಿ ಚನ್ನೈಗೆ ತೆರಳಿರುವುದರಿಂದ ಈ ಯುವಜನೋತ್ಸವ ಮಂಕಾಗಲಿದೆ ಎಂಬ ಆತಂಕ ಸಂಘಟಕರಲ್ಲಿ ಮನೆ ಮಾಡಿದೆ.

ಯುವಜನೋತ್ಸವದ ಪ್ರಯುಕ್ತ ಗಾಜಿನಮನೆಯಲ್ಲಿ ಡಾ: ಗುಬ್ಬಿವೀರಣ್ಣ ವೇದಿಕೆ, ಬಾಲಭವನದಲ್ಲಿ ಅಮರ ಶಿಲ್ಪಿ ಜಕಣಾಚಾರಿ ವೇದಿಕೆ, ವಿಶ್ವವಿದ್ಯಾನಿಲಯದಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೇದಿಕೆ, ಕನ್ನಡ ಭವನದಲ್ಲಿ ಬಿ.ಎಂ.ಶ್ರೀ ವೇದಿಕೆ ಹಾಗೂ ವಿಶ್ವವಿದ್ಯಾನಿಲಯದಲ್ಲಿ ವಿಶ್ವೇಶ್ವರಯ್ಯ ಆಡಿಟೋರಿಯಂನಲ್ಲಿ ತೀ.ನಂ.ಶ್ರೀ ವೇದಿಕೆಯನ್ನು ನಿರ್ಮಿಸಲಾಗಿದೆ.

ಇಂದು ಸಂಜೆ 4 ಗಂಟೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಪೂರ್ವ ಭಾವಿಯಾಗಿ ಟೌನ್‌ಹಾಲ್ ವೃತ್ತದಿಂದ ಗಾಜಿನ ಮನೆಯವರೆಗೆ ವಿವಿಧ ಕಲಾ ತಂಡಗಳೊಂದಿಗೆ ವೈವಿಧ್ಯಮಯ ಮೆರವಣಿಗೆ ಸಹ ನಡೆಯಲಿದೆ.

ರಾಜ್ಯ ಮಟ್ಟದ ಯುವಜನೋತ್ಸವದ ವಿಶೇಷ ಆಕರ್ಷಣೆಯಾಗಿ ಉದ್ಘಾಟನೆ ನಂತರ ಸಂಜೆ 6 ಗಂಟೆಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವರ ಕಲಾ ತಂಡಗಳಿಂದ ‘ಸಾಂಸ್ಕೃತಿಕ ಸಂಜೆ’ ಆಯೋಜಿಸಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.  6 ಗಂಟೆಗೆ ವಿವಿಧ ಸ್ಪರ್ಧೆಗಳು ಜರುಗಲಿದ್ದು, ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಮಣಿಪುರಿ, ಓಡಿಸ್ಸಿ ಹಾಗೂ ಕಥಕ್ ನೃತ್ಯ; ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಏಕಾಂಕ ನಾಟಕ; ಬಿ.ಎಂ.ಶ್ರೀ ವೇದಿಕೆಯಲ್ಲಿ ಸಿತಾರ್ ಮತ್ತು ಗಿಟಾರ್ ವಾದನ; ತೀ.ನಂ.ಶ್ರೀ ವೇದಿಕೆಯಲ್ಲಿ ವೀಣಾವಾದನ ಕಲಾ ಸ್ಪರ್ಧೆಗಳು ನಡೆಯಲಿವೆ.

ಡಿ. 8 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ ಮುಕ್ತಾಯದವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಡಾ: ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಜನಪದ ನೃತ್ಯ, ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಭರತನಾಟ್ಯ ಹಾಗೂ ಕುಚುಪುಡಿ; ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಏಕಾಂಕ ನಾಟಕ; ಬಿ.ಎಂ.ಶ್ರೀ ವೇದಿಕೆಯಲ್ಲಿ ಕರ್ನಾಟಕ ಸಂಗೀತ ಮತ್ತು ಹಾರ್ಮೋನಿಯಂ;  ತೀ.ನಂ.ಶ್ರೀ ವೇದಿಕೆಯಲ್ಲಿ ಕೊಳಲು, ಮೃದಂಗ ಮತ್ತು ತಬಲ ವಾದನ ಕಾರ್ಯಕ್ರಮಗಳು ಜರುಗಲಿವೆ.

ಡಿ. 9 ರಂದು ಬೆಳಿಗ್ಗೆ 9 ಗಂಟೆಯಿಂದ ಮುಕ್ತಾಯದವರೆಗೆ ವಿವಿಧ ಕಲಾ ಸ್ಪರ್ಧೆಗಳು ನಡೆಯಲಿದ್ದು, ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಜನಪದಗೀತೆ; ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಹಿಂದೂಸ್ಥಾನಿ ಸಂಗೀತ, ತೀ.ನಂ.ಶ್ರೀ ವೇದಿಕೆಯಲ್ಲಿ  ಆಶುಭಾಷಣ ಸ್ಪರ್ಧೆ ನಡೆಯಲಿದೆ.  ಸಮಾರೋಪ ಸಮಾರಂಭದ ನಂತರ ಖ್ಯಾತ ಗಾಯಕರುಗಳಾದ ಶ್ರೀಮತಿ ಡಾ. ಶಮಿತಾ ಮಲ್ನಾಡ್ ಮತ್ತು ಹೇಮಂತ್ ಇವರಿಂದ ‘ಗಾನ ನೃತ್ಯ ಸಂಭ್ರಮ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಯುವಜನೋತ್ಸವದಲ್ಲಿ ಭಾಗವಹಿಸುವ ಸ್ಫರ್ಧಿಗಳಿಗೆ ನಗರದ 13 ಸರ್ಕಾರಿ ವಸತಿ ನಿಲಯಗಳಲ್ಲಿ ಹಾಗೂ ಸಿದ್ದಗಂಗಾ ಮಠದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಪರ್ಧಾಳುಗಳಿಗೆ ಕಾರ್ಯಕ್ರಮ ನಡೆಯುವ ಸ್ಥಳಗಳಿಂದ ಊಟದ ವ್ಯವಸ್ಥೆ ಮಾಡಿರುವ ಸ್ಥಳಗಳಿಗೆ, ವಸತಿ ನೀಡಿರುವ ಸ್ಥಳಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆಯೊಂದಿಗೆ ವೈದ್ಯಕೀಯ ಸಿಬ್ಬಂದಿಯನ್ನು ಮತ್ತು ಇತರೆ ವೇದಿಕೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿ 24×7 ರೀತಿಯಲ್ಲಿ ಕಾರ್ಯನಿರ್ವಹಿಸಲು ವ್ಯವಸ್ಥೆಗೊಳಿಸಲಾಗಿದೆ.

Leave a Comment