ರಾಜ್ಯದ ಜನ, ಸರ್ಕಾರ ಬದಲಾವಣೆಗಾಗಿ ಕಾಯುತ್ತಿದ್ದಾರೆ: ಬಿ.ವೈ.ವಿಜಯೇಂದ್ರ

ಹುಬ್ಬಳ್ಳಿ, ಮೇ 16: ಜನರ ಪಾಲಿಗೆ ಸಮ್ಮಿಶ್ರ ಸರ್ಕಾರ ಸತ್ತಿದೆ. ಜನರು ಬಿಜೆಪಿ ಸರ್ಕಾರಕ್ಕಾಗಿ ಕಾಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ, ಚಿಂಚೋಳಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವ ಸಾಧಿಸಲಿದ್ದಾರೆ. ಇದರ ಪರಿಣಾಮ ರಾಜ್ಯ ರಾಜಕೀಯದ ಮೇಲೆ ಉಂಟಾಗಲಿದೆ. ರಾಜಕೀಯದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದರು.

ರಾಜ್ಯ ಸಮ್ಮಿಶ್ರ ಸರ್ಕಾರದ ಬಗ್ಗೆ ಜೆಡಿಎಸ್‍ ಮತ್ತು ಕಾಂಗ್ರೆಸ್ ಶಾಸಕರಿಗೆ ವಿಶ್ವಾಸವಿಲ್ಲ. ಅವರ ಕಚ್ಚಾಟದಿಂದಲೇ ಸರ್ಕಾರ ಪತನವಾಗಲಿದೆ. ಮೈತ್ರಿ ನಾಯಕರ ಹೇಳಿಕೆ ನೋಡಿದರೆ ಇದು ಸ್ಪಷ್ಟವಾಗುತ್ತಿದೆ. ಉಭಯ ಪಕ್ಷಗಳ ನಾಯಕರಲ್ಲಿ ಅಸಮಾಧಾನವಿದೆ. ಫಲಿತಾಂಶದ ಬಳಿಕ ಅಸಮಾಧಾನ ಭುಗಿಲೇಳಲಿದೆ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕ. ಅವರು ಮುಖ್ಯಮಂತ್ರಿಯ ಕನಸು ಕಾಣುತ್ತಿಲ್ಲ. ಕಾಂಗ್ರೆಸ್‍ನ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಅವರು ಪದೇ ಪದೇ ಮುಖ್ಯಮಂತ್ರಿಯ ಪ್ರಸ್ತಾಪ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಉದ್ದೇಶದಿಂದ ಜೆಡಿಎಸ್,ಕಾಂಗ್ರೆಸ್ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದೆ ಎಂದು ದೂರಿದರು.

Leave a Comment