ರಾಜ್ಯದ ಎಲ್ಲೆಡೆ ಕನ್ನಡದ ಕಂಪು ಪಸರಿಸಲಿ ; ರಾಜ್ಯದ ಎಲ್ಲೆಡೆ ಕನ್ನಡದ ಕಂಪು ಪಸರಿಸಲಿ

ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಚಿವ ಹೆಚ್‍ಸಿಎಂ ಕರೆ
ಮೈಸೂರು, ಅ.12- ಕನ್ನಡದ ಪರಂಪರೆ, ಇತಿಹಾಸ ಬಿಂಬಿಸುವ ಸಾಹಿತ್ಯದ ರಥ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಕನ್ನಡದ ಕಂಪನ್ನು ಪಸರಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ ತಿಳಿಸಿದರು.
ನಗರದ ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಇಂದು ಬೆಳಗ್ಗೆ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ಕನ್ನಡ ಭಾಷೆ ಉತ್ಕೃಷ್ಠವಾದುದು. ಭಾಷೆಯ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಕುವೆಂಪು ಸೇರಿದಂತೆ ಹಲವಾರು ದಿಗ್ಗಜ ಸಾಹಿತಿಗಳ ಕೊಡುಗೆ ಅನನ್ಯವಾದುದು ಎಂದರು.
ಭಾರತದಲ್ಲಿ ಪಶ್ಚಿಮ ಬಂಗಾಳಕ್ಕೆ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ದೊರಕಿವೆ. ಅದನ್ನು ಬಿಟ್ಟರೆ ಕರ್ನಾಟಕಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯ. ಸಾಹಿತಿಗಳು ಹಾಕಿಕೊಟ್ಟ ತತ್ವ, ಸಿದ್ಧಾಂತ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಿ ಕನ್ನಡ ಭಾಷೆಯ ಉಳಿವಿಗೆ ನಾವೆಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು ಎಂದು ತಿಳಿಸಿದರು.
1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ ಘಟಕವನ್ನು ಮೈಸೂರಿನಲ್ಲಿ ಸ್ಥಾಪಿಸಿದರು. ಅದು ಇಂದು ಹೆಮ್ಮರವಾಗಿ ಬೆಳೆದಿದೆ. 102 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ಶ್ಲಾಘನೀಯ ಎಂದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸೀಮಿತ ವ್ಯಕ್ತಿಗಳ ಗುಂಪಿನಿಂದ ನಡೆಸುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಮೂಲಕ ಎಲ್ಲರೂ ಸ್ನೇಹಭಾವ, ಒಗ್ಗಟ್ಟಿನಿಂದ ಕನ್ನಡದ ತೇರನ್ನು ಎಳೆಯಬೇಕು. ಕನ್ನಡಾಂಬೆಯ ಕೆಲಸಕ್ಕೆ ವಿರೋಧ ಸಲ್ಲದು. ಎಲ್ಲರೂ ಭಿನ್ನಾಭಿಪ್ರಾಯ ತೊರೆದು ಒಗ್ಗಟ್ಟಿನಿಂದ ಸಮ್ಮೇಳನದ ಯಶಸ್ವಿಗೆ ಕಾರಣೀಭೂತರಾಗಬೇಕು ಎಂದು ಹೇಳಿದರು.
83ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರತಿರೋಧ ವ್ಯಕ್ತಿತ್ವವುಳ್ಳ ಹಾಗೂ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸದಾ ತಿರುಗಿಬೀಳುತ್ತಿರುವ ಮೇರು ವ್ಯಕ್ತಿ ಚಂಪಾ ಅವರನ್ನು ಆಯ್ಕೆ ಮಾಡಲಾಗಿದೆ. ಇವರ ಆಯ್ಕೆಗೆ ಮತ್ತು ಮೈಸೂರಿನಲ್ಲಿಯೇ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಮುಖ್ಯಮಂತ್ರಿ ಅವರ ಆಶಯ, ಸಹಕಾರ ಸ್ಮರಣೀಯ. ಮುಖ್ಯಮಂತ್ರಿಯವರ ಸಹಕಾರದಿಂದ ಸಮ್ಮೇಳನ ಯಶಸ್ವಿಗೊಳಿಬೇಕು, ಎಲ್ಲ್ಲ ಕನ್ನಡಪರ ಸಂಘಟನೆಗಳು ಬೆಂಬಲ ನೀಡಬೇಕು ಎಂದರು.
ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಚಂದ್ರು, ನಗರಾಧ್ಯಕ್ಷ ಕೆ.ಎಸ್. ಶಿವರಾಮ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಕಲಾವಿದ ಶಂಕರಪ್ಪ, ದ್ಯಾವಪ್ಪನಾಯಕ, ಸಾಹಿತಿ ಜಯಪ್ಪ ಹೊನ್ನಾಳಿ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು.

Leave a Comment