ರಾಜ್ಯದಲ್ಲಿ 50 ಲಕ್ಷ ಹೊಸ ಬಿಜೆಪಿ ಸದಸ್ಯತ್ವ ಗುರಿ : ಬಿ ಎಸ್ ಯಡಿಯೂರಪ್ಪ

ಬೆಂಗಳೂರು, ಜೂ 19- ಬಿಜೆಪಿ ಸದಸ್ಯತ್ವ ಅಭಿಯಾನದಿಂದ ಕಳೆದ ವರ್ಷ ರಾಜ್ಯದಲ್ಲಿ 80 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿದ್ದು, ಪ್ರಸಕ್ತ ವರ್ಷ 50 ಲಕ್ಷ ಸದಸ್ಯತ್ವವನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುವುದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸದಸ್ಯತ್ವ ಅಭಿಯಾನಕ್ಕೆ ಪಕ್ಷದ ಮಾಹಿತ ತಂತ್ರಜ್ಞಾನ ವಿಭಾಗ ಸಕ್ರಿಯವಾಗಿದ್ದು, ಗುರಿ ತಲುಪುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ನಗರದಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವೀ ತಯಾರಿಗೆ ವಿಡಿಯೊ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಜೆ ಪಿ ನಡ್ಡಾ , ದೇಶದ ಎಲ್ಲ ರಾಜ್ಯಗಳ ಮುಖಂಡರು ಮತ್ತು ಸದಸ್ಯತ್ವ ಅಭಿಯಾನದ ರಾಜ್ಯ ಉಸ್ತುವಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.

ವಿಡಿಯೋ ಸಂವಾದದಲ್ಲಿ ರಾಜ್ಯ ಬಿಜೆಪಿ ಸದಸ್ಯತ್ವ ಅಭಿಯಾನ ಉಸ್ತುವಾರಿ ಎನ್.ರವಿಕುಮಾರ್, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಬಿ ಎಲ್ ಸಂತೋಷ್, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಈ ವೇಳೆ ಸಂವಾದದಲ್ಲಿ ರಾಜ್ಯ ನಾಯಕರಿಗೆ ಸೂಚನೆ ನೀಡಿದ ಜೆ.ಪಿ ನಡ್ಡಾ ಅವರು, ಕಾಲಮಿತಿಯಲ್ಲಿ ಸದಸ್ಯತ್ವ ಅಭಿಯಾನ ನಡೆಸುವುದರ ಜೊತೆಗೆ ಶಕ್ತಿಕೇಂದ್ರದ ಮಟ್ಟದವರೆಗೂ ಸದಸ್ಯತ್ವ ನೋಂದಣಿ ಮಾಡುವಂತೆ ಸೂಚನೆ ನೀಡಿದರು.ಕಳೆದ ಅವಧಿಯಲ್ಲಿ ಸದಸ್ಯತ್ವದ ಪ್ರಮಾಣ ಕಡಿಮೆಯಾಗಿರುವ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.
ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಉಸ್ತುವಾರಿ ಶಿವರಾಜ್ ಸಿಂಗ್ ಚವ್ಹಾಣ್ ಅವರು ಸಂವಾದದಲ್ಲಿ ಮಾತನಾಡಿ, ಪಕ್ಷದ ಸದಸ್ಯತ್ವವು ಸರ್ವವ್ಯಾಪಿ ಮತ್ತು ಸರ್ವ ಸ್ಪರ್ಶಿಯಾಗಬೇಕು. ಒಂದು ವಾರ ಕಾಲ ಸದಸ್ಯತ್ವ ಅಭಿಯಾನಕ್ಕಾಗಿ ವಿಸ್ತಾರಕರನ್ನು ನಿಯೋಜಿಸಬೇಕು. ಪಕ್ಷವು ಆಡಳಿತದಲ್ಲಿ ಇಲ್ಲದ ರಾಜ್ಯಗಳಲ್ಲೂ ಸದಸ್ಯತ್ವ ನೋಂದಣಿಗೆ ಹೆಚ್ಚಿನ ಮಹತ್ವ ನೀಡಬೇಕೆಂದು ತಿಳಿಸಿದರು.
ಸದಸ್ಯತ್ವದ ಆಂದೋಲನವು ರಾಷ್ಟ್ರವ್ಯಾಪಿ ಜುಲೈ 6 ರಂದು (ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನ) ಆರಂಭವಾಗಲಿದ್ದು ಆಗಸ್ಟ್ 11 ಕ್ಕೆ ಕೊನೆಗೊಳ್ಳಲಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ವಿಭಾಗ ಈ ಬಾರಿಯ ಸದಸ್ಯತ್ವ ಅಭಿಯಾನದ ಯಶಸ್ಸಿಗೆ ವಿಶೇಷ ಯೋಜನೆ ರೂಪಿಸಿದೆ. ಬಿಜೆಪಿ ಮಾಹಿತಿ ತಂತ್ರಜ್ಞಾನ ಕೋಶದ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ಸದಸ್ಯತ್ವ ನೋಂದಣಿಗೆ ರೂಪಿಸಿರುವ ಯೋಜನೆಗಳ ವಿವರಣೆ ನೀಡಿದರು.

Leave a Comment