ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುಮುಖ

ಬೆಂಗಳೂರು, ಏ. ೩- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಸದ್ಯಕ್ಕೆ ಕಡಿಮೆಯಾಗುವ ಮುನ್ಸೂಚನೆ ಕಂಡುಬರುತ್ತಿಲ್ಲ. ಬಾಗಲಕೋಟೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 126ಕ್ಕೇರಿದ್ದು, ಇನ್ನೂ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ದೆಹಲಿಯ ನಿಜಾಮುದ್ದೀನ್ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಾಜ್ಯದ 1,500 ಜನರನ್ನು ಪತ್ತೆಮಾಡಿದ್ದು, ಅವರನ್ನು ಕ್ವಾರಂಟೈನ್‌ಗೆ ಕಳುಹಿಸಿಕೊಡಲಾಗಿದೆ. ಆದರೆ ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆಮಾಡುವ ಕೆಲಸ ಮುಂದುವರೆದಿದೆ.
ಬೀದರ್‌ನಲ್ಲಿ ಪತ್ತೆಯಾಗಿದ್ದ 11 ಸೋಂಕಿತರು ದೆಹಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂಬುದು ಜಿಲ್ಲೆಯಾದ್ಯಂತ ಆತಂಕ ಮೂಡಿಸಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ದೆಹಲಿಗೆ ಹೋಗಿಬಂದವರ ಮತ್ತು ಅವರ ಸಂಪರ್ಕದಲ್ಲಿದ್ದವರನ್ನು ಗುರುತಿಸುವ ಕೆಲಸ ಮುಂದುವರೆದಿದೆ. ಜಿಲ್ಲೆಯಲ್ಲಿ ಸೋಂಕು ಹರಡುವುದನ್ನು ತಡೆಯಲು ಕರ್ನಾಟಕ, ತೆಲಂಗಾಣ ಗಡಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸೋಂಕು ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾದ್ಯಂತ ಆತಂಕದ ಸ್ಥಿತಿ ಎದುರಾಗಿದೆ.
ಬೆಂಗಳೂರಿನಲ್ಲಿ – 51, ಮೈಸೂರು – 21, ಬೀದರ್ – 11, ದಕ್ಷಿಣ ಕನ್ನಡ – 9, ಉತ್ತರ ಕನ್ನಡ – 8, ಚಿಕ್ಕಬಳ್ಳಾಪುರ – 7, ಕಲಬುರಗಿ – 5, ಬಳ್ಳಾರಿ – 4, ಉಡುಪಿ – 3, ದಾವಣಗೆರೆ – 3, ಧಾರವಾಡ – 1, ಬಾಗಲಕೋಟೆ – 1, ತುಮಕೂರು -1, ಕೊಡಗು – 1 ಪ್ರಕರಣಗಳು ದೃಢಪಟ್ಟಿದ್ದು, ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಈ ನಡುವೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಬಹುದು ಎಂಬ ಆತಂಕಕಾರಿ ಹೇಳಿಕೆ ನೀಡುವ ಮೂಲಕ ಸೋಂಕಿತರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಗಳಿಲ್ಲ ಎನ್ನುವ ಚಿತ್ರಣವನ್ನು ನೀಡಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರು ದಾಟಬಹುದು ಅಥವಾ ಸಾವಿರಕ್ಕೆ ಏರಬಹುದು ಎಂಬ ಆತಂಕವನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಲಾಕ್ ಡೌನ್ ಜಾರಿಗೆ ಬಂದು ಇಂದಿಗೆ ಹತ್ತು ದಿನಗಳಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರು, ಇನ್ನೂ ಒಗ್ಗಿಕೊಂಡಿಲ್ಲ. ಮನೆಗಳಿಂದ ಹೊರಬರುವುದಕ್ಕೆ ಕಡಿವಾಣ ಹಾಕಿಕೊಳ್ಳಬೇಕು ಎಂಬ ಸರ್ಕಾರದ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಬೆಂಗಳೂರಿನಲ್ಲಿ ಸ್ವಲ್ಪಮಟ್ಟಿಗೆ ಮನೆಬಿಟ್ಟು ಹೊರಬರುವವರ ಸಂಖ್ಯೆ ಇಂದು ಕಡಿಮೆಯಾಗಿದೆ. ಪೊಲೀಸರ ಗಸ್ತು ಹೆಚ್ಚಾಗಿದ್ದು, ದ್ವಿಚಕ್ರ ಹಾಗೂ ಕಾರುಗಳಲ್ಲಿ ಬರುವವರನ್ನು ತಡೆದು ಸಕಾರಣ ಇದ್ದರೆ ಮಾತ್ರ ಮುಂದೆ ಸಾಗಲು ಅನುವು ಮಾಡಿಕೊಟ್ಟಿರುವ ದೃಶ್ಯಗಳು ಕಂಡುಬಂದವು.
ರೈತರು ಬೆಳೆದ ಹಣ್ಣು, ತರಕಾರಿ, ತೋಟಗಾರಿಕಾ ಬೆಳೆಗಳ ಮಾರಾಟಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಎಪಿಎಂಸಿ, ಹಾಪ್ ಕಾಮ್ಸ್‌ಗಳ ಮೂಲಕ ರೈತರಿಂದ ನೇರವಾಗಿ ಖರೀದಿಸಲು ಮುಂದಾಗಿದೆ. ಇದರಿಂದ ರೈತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡಲಾರಂಭಿಸಿದ್ದು, ಬೆಳೆದ ಬೆಳೆಗಳನ್ನು ಬೀದಿಗೆ ಚೆಲ್ಲುವ ನಿರಾಶಾದಾಯಕ ಭಾವಕ್ಕೆ ಕಡಿವಾಣ ಬೀಳುವ ಸಾಧ್ಯತೆಗಳಿವೆ.
ಕೃಷಿ ಸಚಿವ ಬಿ.ಸಿ. ಪಾಟೀಲ್, ತೋಟಗಾರಿಕಾ ಸಚಿವ ನಾರಾಯಣ ಗೌಡ ಅವರು, ವಿವಿಧ ಮಾರುಕಟ್ಟೆಗಳಿಗೆ ಭೇಟಿನೀಡಿ, ದುಬಾರಿ ಬೆಲೆಗಳಿಗೆ ಹಣ್ಣು, ತರಕಾರಿ, ಮಾರಾಟಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಭೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿ, ಯಾವುದೇ ಕಾರಣಕ್ಕೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು. ಮನೆಗಳಲ್ಲೇ ಪ್ರಾರ್ಥನೆ ಮಾಡುವಂತೆ ಮನವಿ ಮಾಡಿದರು.
ಕೊರೊನಾ ಹರಡುವುದನ್ನು ತಡೆಗಟ್ಟಲು ಎಲ್ಲಾ ಧರ್ಮಗಳ ಮುಖಂಡರು ಸಹಕರಿಸುವಂತೆ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ದೆಹಲಿಯ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಾಜ್ಯದ 1,500ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿ, ಕ್ವಾರಂಟೈನ್ ಮಾಡುವ ಕೆಲಸವನ್ನು ಆರೋಗ್ಯಾಧಿಕಾರಿಗಳು ಮಾಡುತ್ತಿದ್ದು, ಇದಕ್ಕೂ ಸಹಕಾರ ನೀಡುವಂತೆ ಯಡಿಯೂರಪ್ಪ ಅವರು ಸೂಚಿಸಿದ್ದಾರೆ.

Leave a Comment