ರಾಜ್ಯದಲ್ಲಿ ಲಾಕ್ ಡೌನ್ ಸಡಿಲ ಮೋದಿ ಬೇಸರ

ನವದೆಹಲಿ, ಮಾ. ೨೭- ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದ್ದರೂ, ಕರ್ನಾಟಕದಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು, ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿರುವ ಪ್ರಧಾನಿ ಅವರು, ಲಾಕ್ ಡೌನ್ ಜಾರಿಯಲ್ಲಿದ್ದರೂ ಕರ್ನಾಟಕದಲ್ಲಿ ಈ ಕಾನೂನು ಸಡಿಲವಾಗುತ್ತಿದೆ. ಬಂದ್ ನಡುವೆಯೂ ಜನರ ಸಂಚಾರ ಹೆಚ್ಚಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ರೀತಿ ಜನರು ಮನೆಯಿಂದ ಹೊರಗಡೆ ಬಂದರೆ, ಕೊರೊನಾ ಸೋಂಕು ಕಡಿಮೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜನರ ಓ‌ಡಾಟಕ್ಕೆ ಇನ್ನಷ್ಟು ಕಡಿವಾಣ ಹಾಕುವ ಜೊತೆಗೆ ಎಚ್ಚರಿಕೆ ವಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರವಾಣಿ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಲಾಕ್ ಡೌನ್ ಅನ್ನು ಎಲ್ಲಾ ಜಿಲ್ಲೆಗಳಲ್ಲೂ ಕಟ್ಟುನಿಟ್ಟಾಗಿ ಪಾಲಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ. ಬಂದೋಬಸ್ತ್ ಮತ್ತಷ್ಟು ಬಿಗಿಗೊಳಿಸುವಂತೆಯೂ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Comment