ರಾಜ್ಯದಲ್ಲಿ ಮಾಹೇಶ್ವರಿ ಸಮಾಜ

 ಜಾತಿ ಪಟ್ಟಿಗೆ ಸೇರಿಸಲು ಒತ್ತಾಯ
ರಾಯಚೂರು.ಫೆ.11- ರಾಜ್ಯದಲ್ಲಿ ಮಾಹೇಶ್ವರಿ ಸಮಾಜವನ್ನು ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕೆಂದು ಅಖಿಲ ಭಾರತ ವಾರ್ಷಿಯ ಮಾಹೇಶ್ವರಿ ಮಹಾಸಭಾದ ಸಭಾಪತಿ ಶ್ಯಾಮಸುಂದರ್ ಸೋನಿ ಒತ್ತಾಯಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಮಾಹೇಶ್ವರಿ ಸಮಾಜ ರಾಜ್ಯದಲ್ಲಿ ಜಾತಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು, ಇತ್ತೀಚಿಗೆ ಸರಕಾರವು ನಡೆಸಿದ ಜಾತಿವಾರು ಸಮೀಕ್ಷೆಯಲ್ಲಿ ಮಾಹೇಶ್ವರಿ ಸಮಾಜದವರು ಜಾತಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ. ಆದರೂ, ಜಾತಿ ಪಟ್ಟಿಯಲ್ಲಿ ಹೆಸರು ಸೇರಿಸದಿರುವುದು ಖಂಡನೀಯ.
ಈಗಾಗಲೇ ರಾಜಸ್ತಾನ್, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಮಾಹೇಶ್ವರಿ ಸಮಾಜವನ್ನು ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ, ಸರಕಾರದ ಸೌಲಭ್ಯ ಪಡೆಯುತ್ತಿದ್ದಾರೆಂದರು. 2012 ರಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಹೇಶ್ವರಿ ಸಮಾಜ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಮಾಹೇಶ್ವರಿ ಸಮಾಜವು ರಾಜ್ಯದಲ್ಲಿ 2,500 ಕುಟುಂಬಗಳಿವೆ. 11 ಸಾವಿರ ಜನಸಂಖ್ಯೆ ಹೊಂದಿದ್ದಾರೆ, 15 ಜಿಲ್ಲೆಗಳಲ್ಲಿ ಸಮಾಜದವರು ವಾಸಿಸುತ್ತಿದ್ದಾರೆ, ಬೆಂಗಳೂರು ಜಿಲ್ಲೆಯೊಂದರಲ್ಲಿಯೇ 1200 ಕುಟುಂಬಗಳಿವೆಂದರು.
ಬಿಜಾಪೂರು, ಬಾಗಲಕೋಟೆ, ರಾಯಚೂರು, ಬೆಳಗಾವಿ, ಬಳ್ಳಾರಿ, ಕಲಬುರ್ಗಿ, ಬೀದರ್, ಯಾದಗಿರಿ, ಕಾರವಾರ, ಧಾರವಾಡ, ಗದಗ್, ಕೊಪ್ಪಳ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕರ್ನಾಟಕ ಗೋವಾ ಪ್ರದೇಶ ಮಾಹೇಶ್ವರಿ ಸಭಾ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಾಹೇಶ್ವರಿ ಸಮಾಜದವರು ವ್ಯಾಪಾರ, ವಹಿವಾಟಿನಲ್ಲಿ ಹೆಚ್ಚು ನಿರತರಾಗಿದ್ದಾರೆ. ರಾಜಕೀಯ, ಶಿಕ್ಷಣ, ಕ್ರೀಡೆ ಮತ್ತು ಸಂಸ್ಕೃತಿ ಸೇರಿದಂತೆ ಇನ್ನಿತರ ರಂಗದಲ್ಲಿ ತಮ್ಮದೇ ಆದ ವಿಶೇಷ ಚಾಪು ಮೂಡಿಸಿದ್ದಾರೆಂದರು.
ಪುರುಷೋತ್ತಮ ಇನಾನಿ ಮಾತನಾಡಿ, ರಾಜ್ಯದಲ್ಲಿ ಮಾಹೇಶ್ವರಿ ಸಮಾಜದವರು 11 ಸಾವಿರ ಜನಸಂಖ್ಯೆ ಹೊಂದಿದೆ. ಅತಿ ಸಣ್ಣ ಸಮುದಾಯವಾದರೂ ಸಮಾಜದ ಸಾಧನೆ ಅವಿಸ್ಮರಣೀಯವಾಗಿದೆಂದರು. ಐವರು ಸಾಧಕರಿಗೆ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ, ಗೌರವಿಸಿದೆ. ಐಎ‌‌ಎಸ್, ಐಪಿಎಸ್ ಹಾಗೂ ಐಆರ್‌ಎಸ್ ಸೇರಿದಂತೆ ಇನ್ನಿತರ ಪ್ರಮುಖ ಹುದ್ದೆಗಳಲ್ಲಿ ಸಮಾಜದವರು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವೆಂದರು.
ಗೋಕಾಕ್ ಜಿಲ್ಲೆಯಲ್ಲಿ ಮಾಹೇಶ್ವರಿ ಸಮಾಜಕ್ಕೆ ಸೇರಿದ ಬಡ ಕುಟುಂಬಕ್ಕೆ 4 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗಿದೆ. ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ಆರ್ಥಿಕವಾಗಿ ಸಹಾಯ, ಸಹಕಾರ ಮಾಡಲಾಗಿದೆಂದರು. ಸಮಾಜದ ಅನೇಕ ದಶಕಗಳ ಬೇಡಿಕೆಯಾದ ಜಾತಿವಾರು ಪಟ್ಟಿಯಲ್ಲಿ ಮಾಹೇಶ್ವರಿ ಸಮಾಜ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿದರು.
ಶಿಲ್ಪಾ ಮೆಡಿಕೇರ್‌ನ ವಿಷ್ಣುಕಾಂತ್ ಬುತಡಾ, ವಿಠ್ಠಲದಾಸ್ ಇನಾನಿ, ಭಗವಾನ್ ದಾಸ್ ಖೋಬಾ, ವಿಕಾಸ್ ಬೂತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment