ರಾಜ್ಯದಲ್ಲಿ ಬರ : ಬಲತ್ಕಾರ ಸಾಲ ವಸೂಲಿ ಬೇಡ- ಸಿದ್ದು

ಮೈಸೂರು. ಜ. ೨೨- ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ಸಿಕ್ಕ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಲಿ. ಆರೋಪಿ ಆದಿತ್ಯರಾವ್ ಪೊಲೀಸರಿಗೆ ಶರಣಾದ ಬಗ್ಗೆ ನನಗೆ ಇನ್ನೂ ಸಂಪೂರ್ಣ ಮಾಹಿತಿ ಇಲ್ಲ. ಆತನ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ. ಒಟ್ಟಾರೆ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಲವಂತವಾಗಿ ರೈತರಿಂದ ಸಾಲ ವಸೂಲಿ ಮಾಡುತ್ತಿರುವ ವಿಚಾರವಾಗಿ ಕಿಡಿಕಾರಿದರು. ಬರದಿಂದ ತತ್ತರಿಸಿರುವ ರೈತರಿಂದ ಯಾವುದೆ ಕಾರಣಕ್ಕೂ ಸಾಲ ವಸೂಲಿ ಮಾಡಬಾರದು. ರೈತರು ತಾವಾಗಿಯೇ ಸಾಲ ವಾಪಸ್ ಕೊಟ್ಟರೆ ತೆಗೆದುಕೊಳ್ಳಿ. ಆದರೆ ಅವರಿಂದ ಬಲವಂತವಾಗಿ ವಸೂಲಿ ಮಾಡಬಾರದು. ಒಂದು ವೇಳೆ ವಸೂಲಿ ಮಾಡಿದರೆ

ಹೋರಾಟ ಮಾಡಬೇಕಾಗುತ್ತದೆ. ನಾನು ಸಿಎಂ ಆಗಿದ್ದಾಗ ರೈತರಿಂದ ಬಲವಂತದ ಸಾಲವಸೂಲಾತಿ ಬೇಡ ಎಂದಿದ್ದೆ. ರಾಜ್ಯ ಸರ್ಕಾರದ ಈ ನಿಲುವನ್ನು ನಾನು ಖಂಡಿಸುತ್ತೇನೆ ಎಂದರು.

ಬಾಂಗ್ಲ ವಲಸಿಗರ ಶೆಡ್ ಗಳ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿ ಅವರಿಗೆ ಮೊದಲು ಉಳಿದುಕೊಳ್ಳಲು ಸ್ಥಳ ಕೊಟ್ಟವರು ಇವರೆ. ಈಗ ಅವರನ್ನು ಓಡಿಸುವವರು ಇವರೇ. ಇದು ಯಾವ ರೀತಿ ನಿಲುವು. ಇದು ಅವರ ದ್ವಂದ ನಿಲುವನ್ನು ತೋರಿಸುತ್ತದೆ. ಸಿಎಎ ಕಾಯ್ದೆಯಡಿ ಬಾಂಗ್ಲಾ ದಿಂದ ಬಂದವರಿಗೆ ಪೌರತ್ವ ಕೊಡುತ್ತೇವೆ ಎನ್ನುತ್ತಾರೆ‌. ಈಗ ಅವರನ್ನೇ ಓಡಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.

ಮೈಸೂರಿನಲ್ಲಿ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಪ್ರಕರಣದ ವಿಚಾರವಾಗಿ, ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘದ‌ ನಿರ್ಧಾರ ಅಸಾಂವಿಧಾನಿಕ. ಆ ರೀತಿ ನಿರ್ಧಾರ ತೆಗೆದುಕೊಳ್ಳಲು ವಕೀಲರ ಸಂಘಕ್ಕೆ ಅವಕಾಶವೇ ಇಲ್ಲ. ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಪ್ರದರ್ಶಿಸಿದ್ದು ದೇಶ ದ್ರೋಹದ ಕೆಲಸವಲ್ಲ. ಕಾಶ್ಮೀರದಲ್ಲಿ ಇಂದಿಗೂ ತುರ್ತುಸ್ಥಿತಿ ಇದೆ.

ಅದರಿಂದ ಮುಕ್ತಿಗೊಳಿಸಬೇಕೆಂಬ ಭಾವನೆಯಿಂದ ನಳಿನಿ ಪ್ಲೇ ಕಾರ್ಡ್ ಪ್ರದರ್ಶಿಸಿದ್ದಾಳೆ. ಇದರ ವಿರುದ್ದ ಮೈಸೂರು ವಕೀಲರ ಸಂಘ ವಕಾಲತ್ತು ಹಾಕದೆ ನಿರ್ಣಯ ಕೈಗೊಂಡಿರುವುದು ಸರಿಯಲ್ಲ. ಇದನ್ನು ಪ್ರಶ್ನೆ ಮಾಡಿದ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ‌ ಮೇಲೆ ವಕೀಲರು ಹಲ್ಲೆಗೆ ಯತ್ನಿಸಿದ್ದಾರೆ. ಇಂತಹ ಗೂಂಡಾಗಿರಿಯನ್ನು ನಾನು ಖಂಡಿಸುವೆ ಎಂದರು.

Leave a Comment